Google ಡ್ರೈವ್‌ ಸೇವಾ ನಿಯಮಗಳು

ಕೊನೆಯದಾಗಿ ಮಾರ್ಪಡಿಸಿರುವುದು 10 ಡಿಸೆಂಬರ್ 2018 ಜಾರಿಯಾಗುವ ದಿನಾಂಕ: 22 ಜನವರಿ, 2019

1. ಪರಿಚಯ

Google ಡ್ರೈವ್ ಬಳಸಿದ್ದಕ್ಕಾಗಿ ಧನ್ಯವಾದಗಳು. Google ಡ್ರೈವ್ ಸೇವೆಯನ್ನು Google LLC (“Google”, “ನಾವು” ಅಥವಾ “ನಮ್ಮಿಂದ”) ಒದಗಿಸುತ್ತಿದ್ದು, ಇದರ ಕೇಂದ್ರ ಕಚೇರಿಯು 1600 Amphitheatre Parkway, Mountain View California 94043, USA ನಲ್ಲಿದೆ. ನೀವು ಯುರೋಪಿಯನ್ ವಾಣಿಜ್ಯ ಪ್ರದೇಶ ಅಥವಾ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ನೆಲೆಸಿರುವವರಾಗಿದ್ದರೆ, Google ಡ್ರೈವ್ ಸೇವೆಯನ್ನು Google Ireland Limited (“Google”, “ನಾವು” ಅಥವಾ “ನಮ್ಮಿಂದ”) ನಿಂದ ಒದಗಿಸಲಾಗುತ್ತದೆ, ಈ ಕಂಪನಿಯು ಐರ್ಲೆಂಡ್ ಕಾನೂನುಗಳಿಗೆ ಒಳಪಟ್ಟು ಮತ್ತು ಆ ಕಾನೂನುಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತದೆ. (ನೋಂದಾಯಿತ ಸಂಖ್ಯೆ: 368047), ಮತ್ತು ಸ್ಥಳ: Gordon House, Barrow Street, Dublin 4, Ireland. ಈ Google ಡ್ರೈವ್ ಸೇವಾ ನಿಯಮಗಳು (ನಾವು "ನಿಯಮಗಳು" ಎಂದು ಉಲ್ಲೇಖಿಸಿದ) Google ಡ್ರೈವ್‌ನ ನಿಮ್ಮ ಬಳಕೆ ಮತ್ತು ಪ್ರವೇಶಕ್ಕೆ ಮತ್ತು Google ಡ್ರೈವ್‌ನಲ್ಲಿ ನಿಮ್ಮ ವಿಷಯವನ್ನು ಒಳಗೊಂಡಿರುತ್ತದೆ. ನಿಮ್ಮ ಮಾಹಿತಿಯನ್ನು ನಾವು ಹೇಗೆ ಸಂಗ್ರಹಿಸುತ್ತೇವೆ ಮತ್ತು ಬಳಸುತ್ತೇವೆ ಎಂಬುದನ್ನು ನಮ್ಮ ಗೌಪ್ಯತಾ ನೀತಿಯು ವಿವರಿಸುತ್ತದೆ ಮತ್ತು ನಮ್ಮ ಸೇವೆಯನ್ನು ಬಳಸುವಾಗ ನಿಮ್ಮ ಜವಾಬ್ದಾರಿಗಳೇನು ಎಂಬುದನ್ನು ನಮ್ಮ ಪ್ರೋಗ್ರಾಮ್ ನೀತಿಗಳು ವಿವರಿಸುತ್ತವೆ.

ನೀವು Google ಡ್ರೈವ್ ಅನ್ನು ಬಳಸಬೇಕಾದರೆ, ನಿಯಮಗಳನ್ನು ಒಪ್ಪಬೇಕಾಗುತ್ತದೆ. ಅವುಗಳನ್ನು ಎಚ್ಚರಿಕೆಯಿಂದ ಓದಿ. ನಿಯಮಗಳು ನಿಮಗೆ ಅರ್ಥವಾಗದಿದ್ದರೆ ಅಥವಾ ಅವುಗಳಲ್ಲಿನ ಯಾವುದೇ ಭಾಗದ ಕುರಿತು ನಿಮಗೆ ಸಮ್ಮತಿಯಿಲ್ಲ ಎಂದಾದಲ್ಲಿ, ನೀವು Google ಡ್ರೈವ್ ಅನ್ನು ಬಳಸಬಾರದು.

2. Google ಡ್ರೈವ್‌ನ ನಿಮ್ಮ ಬಳಕೆ

ವಯಸ್ಸಿನ ನಿರ್ಬಂಧಗಳು. Google ಡ್ರೈವ್ ಬಳಸಲು ನಿಮಗೆ 13 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಾಗಿರಬೇಕು. ಒಂದು ವೇಳೆ ನೀವು 13 ಮತ್ತು 18 ವರ್ಷಗಳ ನಡುವಿನ ವಯಸ್ಸಿನವರಾಗಿದ್ದರೆ, Google ಡ್ರೈವ್ ಬಳಸಲು ಮತ್ತು ನಿಯಮಗಳಿಗೆ ಸಮ್ಮತಿಸಲು, ಹೆತ್ತವರ ಅಥವಾ ಕಾನೂನುಬದ್ಧ ಪೋಷಕರ ಅನುಮತಿಯನ್ನು ನೀವು ಹೊಂದಿರಬೇಕು.

ವೈಯಕ್ತಿಕ ಬಳಕೆ. ಈ ನಿಯಮಗಳಿಗೆ ಸಮ್ಮತಿಸುವ ಮೂಲಕ, Google ಡ್ರೈವ್ ಅನ್ನು ವ್ಯಾವಹಾರಿಕ ಉದ್ದೇಶಗಳಿಗಾಗಿ ಬಳಸದಿರಲು ನೀವು ಒಪ್ಪುತ್ತೀರಿ; ಡ್ರೈವ್ ಸೇವೆಯನ್ನು ವೈಯಕ್ತಿಕ, ವಾಣಿಜ್ಯೇತರ ಉದ್ದೇಶಗಳಿಗಾಗಿ ಮಾತ್ರ ಬಳಸಬೇಕು. ವ್ಯಾಪಾರ ಸಂಸ್ಥೆಗಳು GSuite ಬಳಸಬೇಕೆಂದು ನಾವು ಶಿಫಾರಸು ಮಾಡುತ್ತೇವೆ.

ನಿಮ್ಮ Google ಖಾತೆ. Google ಡ್ರೈವ್ ಬಳಸಲು ನೀವು Google ಖಾತೆಯನ್ನು ಹೊಂದಿರಬೇಕು. ನಿಮ್ಮ Google ಖಾತೆಯನ್ನು ಸಂರಕ್ಷಿಸಲು, ನಿಮ್ಮ ಪಾಸ್‌ವರ್ಡ್ ಅನ್ನು ಗೌಪ್ಯವಾಗಿ ಇರಿಸಿಕೊಳ್ಳಿ. ನಿಮ್ಮ Google ಖಾತೆಯಲ್ಲಿ ಅಥವಾ ಅದರ ಮೂಲಕ ನಡೆಯುವ ಚಟುವಟಿಕೆಗೆ ನೀವೇ ಜವಾಬ್ದಾರರಾಗಿರುತ್ತೀರಿ. ಥರ್ಡ್-ಪಾರ್ಟಿ ಅಪ್ಲಿಕೇಶನ್‌ಗಳಲ್ಲಿ ನಿಮ್ಮ Google ಖಾತೆಯ ಪಾಸ್‌ವರ್ಡ್ ಅನ್ನು ಮರುಬಳಕೆ ಮಾಡದಿರಲು ಪ್ರಯತ್ನಿಸಿ. ನಿಮ್ಮ ಪಾಸ್‌ವರ್ಡ್ ಅಥವಾ Google ಖಾತೆಯ ಅನಧಿಕೃತ ಬಳಕೆಯ ಕುರಿತು ನಿಮಗೆ ತಿಳಿದುಬಂದಲ್ಲಿ, ಈ ಸೂಚನೆಗಳನ್ನು ಅನುಸರಿಸಿ.

ನಿಮ್ಮ ನಡವಳಿಕೆ. Google ಡ್ರೈವ್ ಅನ್ನು ದುರ್ಬಳಕೆ ಮಾಡಬೇಡಿ. ಆಮದು ಮತ್ತು ಪುನರ್-ಆಮದು ನಿಯಂತ್ರಣ ಕಾನೂನುಗಳು ಮತ್ತು ಕಾಯ್ದೆಗಳೂ ಸೇರಿದಂತೆ, ಕಾನೂನಿನ ಅನುಮತಿಯ ಪ್ರಕಾರ ಮಾತ್ರ ನೀವು Google ಡ್ರೈವ್ ಅನ್ನು ಬಳಸಬಹುದು. ನಿಮ್ಮ ನಡವಳಿಕೆ ಮತ್ತು Google ಡ್ರೈವ್‌ನಲ್ಲಿ ನೀವು ಸಂಗ್ರಹಿಸಿರುವ ಕಂಟೆಂಟ್‌ಗೆ ನೀವೇ ಜವಾಬ್ದಾರರಾಗಿರುತ್ತೀರಿ ಮತ್ತು ನಮ್ಮ ಪ್ರೋಗ್ರಾಮ್ ನೀತಿಗಳನ್ನು ನೀವು ಅನುಸರಿಸಬೇಕು. ನಿಮ್ಮ ನಡವಳಿಕೆ ಮತ್ತು Google ಡ್ರೈವ್‌ನಲ್ಲಿರುವ ಕಂಟೆಂಟ್, ನಿಯಮಗಳನ್ನು ಮತ್ತು ನಮ್ಮ ಪ್ರೋಗ್ರಾಮ್ ನೀತಿಗಳನ್ನು ಅನುಸರಿಸುತ್ತದೆಯೇ ಎನ್ನುವುದನ್ನು ನಾವು ಪರಿಶೀಲಿಸಬಹುದು.

Google ಡ್ರೈವ್, ಮೊಬೈಲ್ ಸಾಧನಗಳಲ್ಲಿ ಲಭ್ಯವಿದೆ. ಟ್ರಾಫಿಕ್ ನಿಯಮಗಳು ಅಥವಾ ಸುರಕ್ಷತಾ ನಿಯಮಗಳನ್ನು ಪಾಲಿಸದಂತೆ ನಿಮ್ಮ ಗಮನ ಸೆಳೆಯುವ ರೀತಿಯಲ್ಲಿ Google ಡ್ರೈವ್ ಅನ್ನು ಬಳಸಬೇಡಿ.

ನಿಮ್ಮ ಕಂಟೆಂಟ್. Google ಡ್ರೈವ್, ಕಂಟೆಂಟ್ ಅನ್ನು ಅಪ್‌ಲೋಡ್ ಮಾಡಲು, ಸಲ್ಲಿಸಲು, ಸಂಗ್ರಹಿಸಲು, ಕಳುಹಿಸಲು ಮತ್ತು ಸ್ವೀಕರಿಸಲು ಅವಕಾಶ ನೀಡುತ್ತದೆ. ಆ ಕಂಟೆಂಟ್‌ನಲ್ಲಿ ನೀವು ಹೊಂದಿರುವ ಯಾವುದೇ ಬೌದ್ಧಿಕ ಆಸ್ತಿಯ ಹಕ್ಕುಗಳ ಮಾಲೀಕತ್ವ ನಿಮ್ಮದಾಗಿರುತ್ತದೆ. ಒಟ್ಟಿನಲ್ಲಿ, ನಿಮಗೆ ಸೇರಿದ್ದು ನಿಮ್ಮದಾಗಿಯೇ ಉಳಿದುಕೊಳ್ಳುತ್ತದೆ.

ನೀವು Google ಡ್ರೈವ್‌ಗೆ ಅಥವಾ ಅದರ ಮೂಲಕ ಕಂಟೆಂಟ್ ಅನ್ನು ಅಪ್‍ಲೋಡ್ ಮಾಡಿದಾಗ, ಸಲ್ಲಿಸಿದಾಗ, ಸಂಗ್ರಹಿಸಿದಾಗ, ಕಳುಹಿಸಿದಾಗ ಅಥವಾ ಸ್ವೀಕರಿಸಿದಾಗ, ಅಂತಹ ಕಂಟೆಂಟ್ ಅನ್ನು ಬಳಸಲು, ಹೋಸ್ಟ್ ಮಾಡಲು, ಸಂಗ್ರಹಿಸಲು, ಪುನರುತ್ಪಾದಿಸಲು, ಮಾರ್ಪಡಿಸಲು, ಅದರ ಉತ್ಪನ್ನಗಳನ್ನು ಸೃಷ್ಟಿಸಲು (ಅನುವಾದಗಳು, ಅಳವಡಿಕೆಗಳು ಅಥವಾ ನಿಮ್ಮ ಕಂಟೆಂಟ್ ನಮ್ಮ ಸೇವೆಯೊಂದಿಗೆ ಇನ್ನೂ ಚೆನ್ನಾಗಿ ಕೆಲಸ ಮಡುವುದಕ್ಕಾಗಿ ನಾವು ಮಾಡುವ ಬದಲಾವಣೆಗಳಿಂದ ಉತ್ಪನ್ನವಾಗುವಂಥವು), ಸಂವಹಿಸಲು, ಪ್ರಕಟಿಸಲು, ಸಾರ್ವಜನಿಕವಾಗಿ ನಡೆಸಲು, ಸಾರ್ವಜನಿಕವಾಗಿ ಪ್ರದರ್ಶಿಸಲು ಮತ್ತು ವಿತರಿಸಲು ನೀವು Google ಗೆ ಜಾಗತಿಕ ಪರವಾನಗಿಯನ್ನು ನೀಡುತ್ತೀರಿ. ಈ ಪರವಾನಗಿಯಲ್ಲಿ ನೀವು ನೀಡುವ ಹಕ್ಕುಗಳು ಕಾರ್ಯಾಚರಣೆ, ಪ್ರಚಾರ ಮತ್ತು ನಮ್ಮ ಸೇವೆಗಳ ಸುಧಾರಣೆ ಮತ್ತು ಹೊಸ ಸೇವೆಗಳ ಅಭಿವೃದ್ಧಿಯಂತಹ ಸೀಮಿತ ಉದ್ದೇಶಗಳಿಗಾಗಿ ಮಾತ್ರ ಇರುತ್ತವೆ. ನಮ್ಮ ಸೇವೆಗಳನ್ನು ಬಳಸುವುದನ್ನು ನೀವು ನಿಲ್ಲಿಸಿದರೂ, ನಿಮ್ಮ ಕಂಟೆಂಟ್ ಅನ್ನು ಅಳಿಸದ ಹೊರತು ಈ ಪರವಾನಗಿ ಮುಂದುವರಿಯುತ್ತದೆ. ನೀವು Google ಡ್ರೈವ್‌ಗೆ ಸಲ್ಲಿಸುವ ಯಾವುದೇ ಕಂಟೆಂಟ್‌ಗಾಗಿ ಈ ಪರವಾನಗಿಯನ್ನು ನೀಡಲು ಬೇಕಾದ ಹಕ್ಕುಗಳನ್ನು ನೀವು ಹೊಂದಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.

Google ಡ್ರೈವ್‌ನಲ್ಲಿ ನಿಮ್ಮ ಕಂಟೆಂಟ್‌ನೊಂದಿಗೆ ಇತರರು ಏನು ಮಾಡಬಹುದು ಎಂಬುದನ್ನು ನಿಯಂತ್ರಿಸಲು Google ಡ್ರೈವ್‌ನಲ್ಲಿರುವ ಹಂಚಿಕೆ ಸೆಟ್ಟಿಂಗ್‌ಗಳು ನಿಮಗೆ ಅವಕಾಶ ನೀಡುತ್ತವೆ. ನೀವು Google ಡ್ರೈವ್‌ನಲ್ಲಿ ರಚಿಸುವ ಅಥವಾ ಅದಕ್ಕೆ ಅಪ್‌ಲೋಡ್ ಮಾಡುವ ಎಲ್ಲಾ ಕಂಟೆಂಟ್‌ನ ನಿಯಂತ್ರಕರು ಡಿಫಾಲ್ಟ್ ಆಗಿ ನೀವೇ ಆಗಿರುತ್ತೀರಿ. ನಿಮ್ಮ ಕಂಟೆಂಟ್ ಅನ್ನು ನೀವು ಹಂಚಿಕೊಳ್ಳಬಹುದು ಅಥವಾ ನಿಮ್ಮ ಕಂಟೆಂಟ್‌ನ ನಿಯಂತ್ರಣವನ್ನು ಇತರರಿಗೆ ವರ್ಗಾಯಿಸಬಹುದು.

ನಮ್ಮ ಸ್ವಯಂಚಾಲಿತ ಸಿಸ್ಟಂಗಳು ನಿಮಗೆ ಕಸ್ಟಮೈಸ್ ಮಾಡಿದ ಹುಡುಕಾಟ ಫಲಿತಾಂಶಗಳು ಮತ್ತು ಸ್ಪ್ಯಾಮ್ ಹಾಗೂ ಮಾಲ್‌ವೇರ್ ಪತ್ತೆಹಚ್ಚುವಿಕೆಯಂತಹ, ವೈಯಕ್ತಿಕವಾಗಿ ಸೂಕ್ತವಾದ ಉತ್ಪನ್ನ ವೈಶಿಷ್ಟ್ಯಗಳನ್ನು ಒದಗಿಸಲು ನಿಮ್ಮ ಕಂಟೆಂಟ್ ಅನ್ನು ವಿಶ್ಲೇಷಿಸುತ್ತವೆ. ಕಂಟೆಂಟ್ ಅನ್ನು ಸ್ವೀಕರಿಸುವಾಗ, ಹಂಚಿಕೊಂಡಾಗ, ಅಪ್‌ಲೋಡ್ ಮಾಡಿದಾದ ಮತ್ತು ಅದನ್ನು ಸಂಗ್ರಹಿಸುವಾಗ, ಈ ವಿಶ್ಲೇಷಣೆ ನಡೆಯುತ್ತದೆ. ಕಂಟೆಂಟ್ ಅನ್ನು Google ಹೇಗೆ ಬಳಸುತ್ತದೆ ಮತ್ತು ಸಂಗ್ರಹಿಸುತ್ತದೆ ಎಂಬ ಕುರಿತು ಹೆಚ್ಚಿನ ಮಾಹಿತಿಯನ್ನು ನಮ್ಮ ಗೌಪ್ಯತಾ ನೀತಿ ಯಲ್ಲಿ ನೀವು ಪಡೆದುಕೊಳ್ಳಬಹುದು. ನೀವು Google ಡ್ರೈವ್ ಕುರಿತು ಪ್ರತಿಕ್ರಿಯೆ ಅಥವಾ ಸಲಹೆಗಳನ್ನು ಸಲ್ಲಿಸಿದರೆ, ನಿಮ್ಮ ಪ್ರತಿಕ್ರಿಯೆ ಅಥವಾ ಸಲಹೆಗಳನ್ನು ನಿಮಗೆ ಹೊಣೆಗಾರಿಕೆ ಇಲ್ಲದಂತೆ ನಾವು ಬಳಸಬಹುದು.

ಪ್ರಕಟಣೆಗಳು. ನೀವು Google ಡ್ರೈವ್ ಅನ್ನು ಬಳಸುವುದಕ್ಕೆ ಸಂಬಂಧಿಸಿದಂತೆ ಸೇವಾ ಪ್ರಕಟಣೆಗಳು, ಆಡಳಿತಾತ್ಮಕ ಸಂದೇಶಗಳು ಮತ್ತು ಇತರ ಮಾಹಿತಿಯನ್ನು ನಾವು ಕಳುಹಿಸಬಹುದು. ಇವುಗಳಲ್ಲಿ ಕೆಲವು ಸಂವಹನಗಳಿಂದ ಹೊರಗುಳಿಯುವುದನ್ನು ನೀವು ಆಯ್ಕೆ ಮಾಡಬಹುದು.

ನಮ್ಮ Google ಡ್ರೈವ್ ಸೇವೆಗಳು. Google ಡ್ರೈವ್ ಅನ್ನು ಬಳಸಿದ ಮಾತ್ರಕ್ಕೆ ನಿಮಗೆ Google ಡ್ರೈವ್‌ನಲ್ಲಿನ ಅಥವಾ ನೀವು ಪ್ರವೇಶ ಪಡೆಯುವ ಕಂಟೆಂಟ್‌ನಲ್ಲಿನ ಯಾವುದೇ ಬೌದ್ಧಿಕ ಆಸ್ತಿಯ ಹಕ್ಕುಗಳ ಮಾಲೀಕತ್ವ ಲಭಿಸುವುದಿಲ್ಲ. Google ಡ್ರೈವ್‌ನಲ್ಲಿರುವ ಕಂಟೆಂಟ್‌ನ ಮಾಲೀಕರಿಂದ ಅನುಮತಿ ಪಡೆದುಕೊಳ್ಳದ ಹೊರತು ಅಥವಾ ನೀವು ಕಾನೂನುಬದ್ಧ ಅನುಮತಿಯನ್ನು ಪಡೆದುಕೊಂಡಿರದ ಹೊರತು, ಆ ಕಂಟೆಂಟ್ ಅನ್ನು ನೀವು ಬಳಸುವಂತಿಲ್ಲ. Google ಡ್ರೈವ್‌ನಲ್ಲಿ ಬಳಸಿರುವ ಯಾವುದೇ ಬ್ರ್ಯಾಂಡಿಂಗ್ ಅಥವಾ ಲೋಗೋಗಳನ್ನು ಬಳಸುವ ಹಕ್ಕನ್ನು ಈ ನಿಯಮಗಳು ನಿಮಗೆ ನೀಡುವುದಿಲ್ಲ. Google ಡ್ರೈವ್‌ನಲ್ಲಿ ಅಥವಾ ಅದರ ಜೊತೆಗೆ ಪ್ರದರ್ಶಿಸಿರುವ ಯಾವುದೇ ಕಾನೂನು ಸೂಚನೆಗಳನ್ನು ತೆಗೆದುಹಾಕಬೇಡಿ, ಅಸ್ಪಷ್ಟಗೊಳಿಸಬೇಡಿ ಅಥವಾ ಮಾರ್ಪಡಿಸಬೇಡಿ.

3. ಗೌಪ್ಯತೆ ರಕ್ಷಣೆ

ನೀವು Google ಡ್ರೈವ್ ಅನ್ನು ಬಳಸುವಾಗ, ನಿಮ್ಮ ವೈಯಕ್ತಿಕ ಡೇಟಾವನ್ನು ನಾವು ಹೇಗೆ ನಿರ್ವಹಿಸುತ್ತೇವೆ ಮತ್ತು ನಿಮ್ಮ ಗೌಪ್ಯತೆಯನ್ನು ನಾವು ಹೇಗೆ ಕಾಪಾಡುತ್ತೇವೆ ಎಂಬುದನ್ನು Google ನ ಗೌಪ್ಯತಾ ನೀತಿಯು ವಿವರಿಸುತ್ತದೆ. Google ಡ್ರೈವ್ ಅನ್ನು ಬಳಸುವ ಮೂಲಕ, ಈ ಡೇಟಾವನ್ನು Google ನಮ್ಮ ಗೌಪ್ಯತಾ ನೀತಿಗಳ ಅನುಸಾರ ಬಳಸಬಹುದು ಎಂಬುದನ್ನು ನೀವು ಒಪ್ಪುತ್ತೀರಿ.

4. ಕೃತಿಸ್ವಾಮ್ಯ ರಕ್ಷಣೆ

ಆರೋಪಿತ ಕೃತಿಸ್ವಾಮ್ಯ ಉಲ್ಲಂಘನೆಯ ಎಲ್ಲಾ ಸೂಚನೆಗಳಿಗೆ ನಾವು ಪ್ರತಿಸ್ಪಂದಿಸುತ್ತೇವೆ ಮತ್ತು ಪುನರಾವರ್ತಿತವಾಗಿ ಉಲ್ಲಂಘನೆ ಮಾಡುವವರ ಖಾತೆಗಳನ್ನು U.S. Digital Millennium Copyright Act ನಲ್ಲಿ ಹೇಳಿರುವ ಪ್ರಕ್ರಿಯೆಯ ಅನುಸಾರ ಕೊನೆಗೊಳಿಸುತ್ತೇವೆ.

ಕೃತಿಸ್ವಾಮ್ಯ ಹೊಂದಿರುವವರು ತಮ್ಮ ಬೌದ್ಧಿಕ ಆಸ್ತಿಯನ್ನು ಆನ್‌ಲೈನ್‌ನಲ್ಲಿ ನಿರ್ವಹಿಸಲು ಸಾಧ್ಯವಾಗುವಂತೆ ನಾವು ಮಾಹಿತಿಯನ್ನು ಒದಗಿಸುತ್ತೇವೆ. ನಿಮ್ಮ ಕೃತಿಸ್ವಾಮ್ಯದ ಹಕ್ಕುಗಳನ್ನು ಯಾರಾದರೂ ಉಲ್ಲಂಘಿಸುತ್ತಿದ್ದಾರೆ ಎಂದು ನೀವು ಭಾವಿಸಿದಲ್ಲಿ ಮತ್ತು ನಮಗೆ ತಿಳಿಸಬೇಕಾಗಿದ್ದಲ್ಲಿ, ಸೂಚನೆಗಳನ್ನು ಸಲ್ಲಿಸುವ ಕುರಿತು ಮತ್ತು ಸೂಚನೆಗಳಿಗೆ ಪ್ರತಿಸ್ಪಂದಿಸುವ ಕುರಿತಂತೆ Google ನ ಕಾರ್ಯನೀತಿಯನ್ನು ನಮ್ಮ ಸಹಾಯ ಕೇಂದ್ರದಲ್ಲಿ ಕಂಡುಕೊಳ್ಳಬಹುದು.

5. ಪ್ರೋಗ್ರಾಮ್ ನೀತಿಗಳು

ಕಂಟೆಂಟ್ ಕಾನೂನುಬಾಹಿರವಾಗಿದೆಯೇ ಅಥವಾ ನಮ್ಮ ಪ್ರೋಗ್ರಾಮ್ ನೀತಿಗಳನ್ನು ಉಲ್ಲಂಘಿಸುತ್ತದೆಯೇ ಎನ್ನುವುದನ್ನು ತೀರ್ಮಾನಿಸಲು ನಾವು ಕಂಟೆಂಟ್ ಅನ್ನು ಪರಿಶೀಲಿಸಬಹುದು. ಮಾತ್ರವಲ್ಲದೆ, ನಮ್ಮ ಕಾರ್ಯನೀತಿಗಳು ಅಥವಾ ಕಾನೂನನ್ನು ಉಲ್ಲಂಘಿಸುತ್ತದೆ ಎಂದು ನಾವು ಭಾವಿಸುವ ಕಂಟೆಂಟ್ ಅನ್ನು ತೆಗೆದುಹಾಕಬಹುದು ಅಥವಾ ಪ್ರದರ್ಶಿಸಲು ನಿರಾಕರಿಸಬಹುದು. ಆದರೆ, ನಾವು ಕಂಟೆಂಟ್ ಅನ್ನು ಪರಿಶೀಲಿಸುತ್ತೇವೆ ಎನ್ನುವುದು ಅದರ ಅರ್ಥವಲ್ಲ; ನೀವು ಹಾಗೆ ಭಾವಿಸಿಕೊಳ್ಳಬೇಡಿ.

6. ನಮ್ಮ ಸೇವೆಗಳಲ್ಲಿನ ಸಾಫ್ಟ್‌ವೇರ್ ಕುರಿತು

ಕ್ಲೈಂಟ್ ಸಾಫ್ಟ್‌ವೇರ್. ಡೌನ್‌ಲೋಡ್ ಮಾಡಬಹುದಾದ ಕ್ಲೈಂಟ್ ಸಾಫ್ಟ್‌ವೇರ್ (“ಸಾಫ್ಟ್‌ವೇರ್”) ಅನ್ನು Google ಡ್ರೈವ್ ಒಳಗೊಂಡಿದೆ. ಇದರ ಹೊಸ ಆವೃತ್ತಿ ಅಥವಾ ವೈಶಿಷ್ಟ್ಯವು ಲಭ್ಯವಾದಾಗ, ಈ ಸಾಫ್ಟ್‌ವೇರ್ ನಿಮ್ಮ ಸಾಧನದಲ್ಲಿ ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗಬಹುದು. Google ಡ್ರೈವ್‌ನ ಭಾಗವಾಗಿ Google ನಿಮಗೆ ಒದಗಿಸುವ ಸಾಫ್ಟ್‌ವೇರ್ ಅನ್ನು ಬಳಸುವುದಕ್ಕೆ Google ನಿಮಗೆ ಖಾಸಗಿ, ಜಾಗತಿಕ, ರಾಯಲ್ಟಿ ಮುಕ್ತ, ಇತರರಿಗೆ ನಿಯೋಜಿಸಲಾಗದ ಮತ್ತು ವಿಶೇಷವಲ್ಲದ ಪರವಾನಗಿಯನ್ನು ನೀಡುತ್ತದೆ. ಈ ಷರತ್ತುಗಳ ಅನುಮತಿಯ ಅನುಸಾರ, Google ಒದಗಿಸಿರುವ ರೀತಿಯಲ್ಲಿ ನೀವು Google ಡ್ರೈವ್‌ ಅನ್ನು ಬಳಸುವುದು ಮತ್ತು ಅದರ ಪ್ರಯೋಜನ ಪಡೆದುಕೊಳ್ಳುವುದನ್ನು ಸಾಧ್ಯವಾಗಿಸುವ ಏಕೈಕ ಉದ್ದೇಶದಿಂದ ಈ ಪರವಾನಗಿಯನ್ನು ನೀಡಲಾಗಿದೆ. ಮುಂದೆ ಹೇಳಿರುವ ನಿರ್ಬಂಧಗಳನ್ನು ಕಾನೂನು ನಿಷೇಧಿಸಿರದ ಹೊರತು ಅಥವಾ ನಮ್ಮ ಲಿಖಿತ ಅನುಮತಿಯನ್ನು ನೀವು ಹೊಂದಿರದ ಹೊರತು, Google ಡ್ರೈವ್ ಅಥವಾ ಅದರಲ್ಲಿರುವ ಸಾಫ್ಟ್‌ವೇರ್‌ನ ಯಾವುದೇ ಭಾಗವನ್ನು ನೀವು ನಕಲಿಸುವಂತಿಲ್ಲ, ಮಾರ್ಪಡಿಸುವಂತಿಲ್ಲ, ವಿತರಿಸುವಂತಿಲ್ಲ, ಮಾರಾಟ ಮಾಡುವಂತಿಲ್ಲ ಅಥವಾ ಆ ಸಾಫ್ಟ್‌ವೇರ್‌ನ ಸೋರ್ಸ್ ಕೋಡ್ ಅನ್ನು ರಿವರ್ಸ್ ಇಂಜಿನಿಯರ್ ಮಾಡುವಂತಿಲ್ಲ ಅಥವಾ ಸೋರ್ಸ್ ಕೋಡ್ ಪಡೆದುಕೊಳ್ಳಲು ಪ್ರಯತ್ನಿಸುವಂತಿಲ್ಲ.

ಓಪನ್ ಸೋರ್ಸ್ ಸಾಫ್‌ವೇರ್. ಓಪನ್ ಸೋರ್ಸ್ ಸಾಫ್ಟ್‌ವೇರ್ ನಮಗೆ ಮುಖ್ಯವಾಗಿದೆ. Google ಡ್ರೈವ್‌ನಲ್ಲಿ ಬಳಸುವ ಕೆಲವೊಂದು ಸಾಫ್ಟ್‌ವೇರ್ ಅನ್ನು ಓಪನ್ ಸೋರ್ಸ್ ಪರವಾನಗಿಯ ಅಡಿಯಲ್ಲಿ ನೀಡಿರಬಹುದು. ಇದನ್ನು ನಾವು ನಿಮಗೆ ಲಭ್ಯಗೊಳಿಸುತ್ತೇವೆ. ಈ ಷರತ್ತುಗಳನ್ನು ನಿರ್ದಿಷ್ಟವಾಗಿ ಅತಿಕ್ರಮಿಸುವ ನಿಬಂಧನೆಗಳು ಓಪನ್ ಸೋರ್ಸ್ ಪರವಾನಗಿಯಲ್ಲಿ ಇರಬಹುದು.

7. Google ಡ್ರೈವ್ ಮಾರ್ಪಡಿಸುವಿಕೆ ಮತ್ತು ಕೊನೆಗೊಳಿಸುವಿಕೆ

Google ಡ್ರೈವ್‍ನಲ್ಲಿನ ಬದಲಾವಣೆಗಳು. ನಾವು Google ಡ್ರೈವ್ ಅನ್ನು ಸತತವಾಗಿ ಬದಲಾಯಿಸುತ್ತಿದ್ದೇವೆ ಮತ್ತು ಸುಧಾರಿಸುತ್ತಿದ್ದೇವೆ. ನಾವು ಕಾರ್ಯಕ್ಷಮತೆ ಅಥವಾ ಸುರಕ್ಷತಾ ಸುಧಾರಣೆಗಳನ್ನು ಮಾಡಬಹುದು, ಕಾರ್ಯಾಚರಣೆಗಳು ಅಥವಾ ವೈಶಿಷ್ಟ್ಯಗಳನ್ನು ಬದಲಾಯಿಸಬಹುದು, ಅಥವಾ ಕಾನೂನು ಪರಿಪಾಲನೆಗಾಗಿ ಅಥವಾ ನಮ್ಮ ಸಿಸ್ಟಂಗಳ ಮೇಲೆ ಅಥವಾ ಸಿಸ್ಟಂಗಳ ಕಾನೂನುಬಾಹಿರ ಚಟುವಟಿಕೆಗಳು ಅಥವಾ ದುರ್ಬಳಕೆಯನ್ನು ತಡೆಯಲು ಬದಲಾವಣೆಗಳನ್ನು ಮಾಡಬಹುದು. Google ಡ್ರೈವ್ ಕುರಿತು ಮಾಹಿತಿ ಪಡೆಯಲು ನೀವು ಇಲ್ಲಿ ಸಬ್‌ಸ್ಕ್ರೈಬ್ ಮಾಡಬಹುದು. Google ಡ್ರೈವ್ ಅನ್ನು ನೀವು ಬಳಸುವುದರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ನಾವು ಭಾವಿಸುವ ಪ್ರಮುಖ ಬದಲಾವಣೆಗಳ ಕುರಿತು ನಾವು ಸೂಚನೆಯನ್ನು ನೀಡುತ್ತೇವೆ. ಆದರೂ, ಕೆಲವೊಮ್ಮೆ ನಾವು ಸೂಚನೆ ನೀಡದೆಯೇ Google ಡ್ರೈವ್‌ಗೆ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಸೇವೆಯ ಸುರಕ್ಷತೆ ಮತ್ತು ಸರಿಯಾದ ಕಾರ್ಯಚರಣೆಯನ್ನು ಖಚಿತಪಡಿಸಲು, ದುರ್ಬಳಕೆಯನ್ನು ತಡೆಗಟ್ಟಲು ಅಥವಾ ಕಾನೂನು ಆವಶ್ಯಕತೆಗಳನ್ನು ಪೂರೈಸಬೇಕಾದ ಸಂದರ್ಭಗಳಿಗೆ ಮಾತ್ರ ಇವುಗಳನ್ನು ಸೀಮಿತಗೊಳಿಸಲಾಗುವುದು.

ಅಮಾನತು ಮತ್ತು ಕೊನೆಗೊಳಿಸುವಿಕೆ. Google ಡ್ರೈವ್ ಬಳಸುವುದನ್ನು ನೀವು ಯಾವುದೇ ಸಮಯದಲ್ಲೂ ನಿಲ್ಲಿಸಬಹುದು, ಆದರೆ ಅದು ನಮಗೆ ಬೇಸರದ ಸಂಗತಿಯಾಗಿರುತ್ತದೆ. ನಮ್ಮ ನಿಯಮಗಳು ಅಥವಾ ನಮ್ಮ ಪ್ರೋಗ್ರಾಮ್ ನೀತಿಗಳನ್ನು ನೀವು ಗಮನಾರ್ಹವಾಗಿ ಅಥವಾ ಪುನರಾವರ್ತಿತವಾಗಿ ಉಲ್ಲಂಘಿಸಿದಲ್ಲಿ, ನೀವು Google ಡ್ರೈವ್‌ಗೆ ಪ್ರವೇಶ ಪಡೆಯುವುದನ್ನು ನಾವು ಅಮಾನತು ಮಾಡಬಹುದು ಅಥವಾ ಶಾಶ್ವತವಾಗಿ ನಿಷ್ಕ್ರಿಯಗೊಳಿಸಬಹುದು. Google ಡ್ರೈವ್‌ಗೆ ನೀವು ಪ್ರವೇಶಿಸುವುದನ್ನು ನಾವು ಅಮಾನತುಗೊಳಿಸುವ ಅಥವಾ ನಿಷ್ಕ್ರಿಯಗೊಳಿಸುವ ಕುರಿತು ನಾವು ಮುಂಚಿತವಾಗಿ ತಿಳಿಸುತ್ತೇವೆ. ಆದರೆ, ನಮಗೆ ಕಾನೂನು ಬಾಧ್ಯತೆಯನ್ನು ಉಂಟುಮಾಡುವ ರೀತಿಯಲ್ಲಿ ಅಥವಾ ಇತರ ಬಳಕೆದಾರರು Google ಡ್ರೈವ್‌ಗೆ ಪ್ರವೇಶ ಪಡೆಯುವುದಕ್ಕೆ ಮತ್ತು ಬಳಸುವುದಕ್ಕೆ ಅಡ್ಡಿಮಾಡುವ ರೀತಿಯಲ್ಲಿ ನೀವು Google ಡ್ರೈವ್ ಅನ್ನು ಬಳಸುತ್ತಿದ್ದರೆ, ನಿಮಗೆ ತಿಳಿಸದೆಯೇ, Google ಡ್ರೈವ್‌ಗೆ ನೀವು ಪ್ರವೇಶಿಸುವುದನ್ನು ನಾವು ಅಮಾನತು ಮಾಡಬಹುದು ಅಥವಾ ನಿಷ್ಕ್ರಿಯಗೊಳಿಸಬಹುದು.

Google ಡ್ರೈವ್ ಸ್ಥಗಿತಗೊಳಿಸುವಿಕೆ. ನಾವು Google ಡ್ರೈವ್ ಅನ್ನು ಸ್ಥಗಿತಗೊಳಿಸಲು ನಿರ್ಧರಿಸಿದರೆ, ಕನಿಷ್ಠ 60 ದಿನಗಳಿಗೆ ಮುಂಚಿತವಾಗಿ ನಿಮಗೆ ಸೂಚನೆ ನೀಡುತ್ತೇವೆ. ಈ ಸೂಚನಾ ಅವಧಿಯಲ್ಲಿ, Google ಡ್ರೈವ್‌ನಿಂದ ನಿಮ್ಮ ಫೈಲ್‌ಗಳನ್ನು ಹೊರತೆಗೆಯಲು ನಿಮಗೆ ಅವಕಾಶವಿರುತ್ತದೆ. 60 ದಿನಗಳ ಈ ಅವಧಿ ಮುಗಿದ ಬಳಿಕ ನಿಮ್ಮ ಫೈಲ್‌ಗಳಿಗೆ ನೀವು ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ನಿಮ್ಮ ಫೈಲ್‌ಗಳಿಗೆ ನೀವೇ ಮಾಲೀಕರು ಮತ್ತು ಈ ಫೈಲ್‌ಗಳಿಗೆ ನಿಮ್ಮ ಪ್ರವೇಶವನ್ನು ಸಂರಕ್ಷಿಸುವುದು ಮುಖ್ಯ ಎಂದು ನಾವು ಭಾವಿಸುತ್ತೇವೆ. ನಿಮ್ಮ ಫೈಲ್‌ಗಳನ್ನು ಹೇಗೆ ಡೌನ್‌ಲೋಡ್ ಮಾಡಬೇಕು ಎಂಬ ಕುರಿತಾದ ಸೂಚನೆಗಳಿಗಾಗಿ, ನಮ್ಮ ಬೆಂಬಲ ಪುಟ ಕ್ಕೆ ಭೇಟಿ ನೀಡಿ.

8. ಹೆಚ್ಚುವರಿ ಸಂಗ್ರಹಣೆಯ ಖರೀದಿಸುವಿಕೆ ಮತ್ತು ಪಾವತಿಗಳು

ಉಚಿತ ಸಂಗ್ರಹಣೆ. Google ಆನ್‌ಲೈನ್ ಸಂಗ್ರಹಣೆಯಲ್ಲಿ 15 GB ಉಚಿತ ಸ್ಥಳಾವಕಾಶವನ್ನು ಬಳಸಲು Google ನಿಮಗೆ ಅವಕಾಶ ನೀಡುತ್ತದೆ (ಷರತ್ತುಗಳನ್ನು ನೀವು ಅನುಸರಿಸುವುದಕ್ಕೆ ಒಳಪಟ್ಟು). ಇದನ್ನು Google ಡ್ರೈವ್, Gmail ಮತ್ತು Google Photos ನೊಂದಿಗೆ ಬಳಸಬಹುದು.

ಹೆಚ್ಚುವರಿ ಸಂಗ್ರಹಣೆಯ ಖರೀದಿ. ನಿಮಗೆ ಬೇಕಾದರೆ, ನೀವು ಹೆಚ್ಚುವರಿ ಸಂಗ್ರಹಣೆ (“ಪಾವತಿಸಿದ ಸಂಗ್ರಹಣಾ ಪ್ಲ್ಯಾನ್”) ಸಹ ಖರೀದಿಸಬಹುದು. ರದ್ದುಗೊಳಿಸುವ ಸಮಯದ ತನಕ, ನೀವು ಪಾವತಿಸಿದ ಸಂಗ್ರಹಣಾ ಪ್ಲ್ಯಾನ್‌ಗೆ ಪರಿವರ್ತಿಸುವ ದಿನಾಂಕದಿಂದ ಮತ್ತು ನಿಯತಕಾಲಿಕ ಸೇವಾ ಅವಧಿ ನವೀಕರಣದ ಸಂದರ್ಭದಲ್ಲಿ, ನಾವು ಸ್ವಯಂಚಾಲಿತವಾಗಿ ಬಿಲ್ ಮಾಡುತ್ತೇವೆ. ಪಾವತಿಸಿದ ಸಂಗ್ರಹಣಾ ಪ್ಲ್ಯಾನ್ ಖರೀದಿಸಲು, Google ಪಾವತಿಗಳ ಸೇವಾ ನಿಯಮಗಳಲ್ಲಿ ನಿರ್ದಿಷ್ಟಪಡಿಸಿದ ಪಾವತಿ ನಿಯಮಗಳಿಗೆ ನೀವು ಸಮ್ಮತಿಸಬೇಕು. ನೀವು Google ಪಾವತಿ ಖಾತೆಯನ್ನು ಹೊಂದಿರದಿದ್ದರೆ, ಈ ಲಿಂಕ್‌ಗೆ ಹೋಗಿ ನೀವು ಅದನ್ನು ಹೊಂದಿಸಬಹುದು. ಇಲ್ಲಿ ನೀವು Google ಪಾವತಿಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಸಹ ಪಡೆದುಕೊಳ್ಳಬಹುದು. Google ಪಾವತಿಗಳ ಖಾತೆಯನ್ನು ಬಳಸಿ ನೀವು ಪಾವತಿಸಿದ ಸಂಗ್ರಹಣಾ ಪ್ಲ್ಯಾನ್ ಖರೀದಿಸಲು ಬಯಸಿದಾಗಲೂ ಸಹ ಪಾವತಿಗಳ ಸೇವಾ ನಿಯಮಗಳು ಮತ್ತು ಗೌಪ್ಯತಾ ಸೂಚನೆಯು ಅನ್ವಯಿಸುತ್ತದೆ. ಯಾವುದೇ ಖರೀದಿಯನ್ನು ಮಾಡುವ ಮೊದಲು ನೀವು ಆ ನಿಯಮಗಳನ್ನು ಎಚ್ಚರಿಕೆಯಿಂದ ಓದಿ.

ರದ್ದುಗೊಳಿಸುವಿಕೆ. ನಿಮ್ಮ ಪಾವತಿಸಿದ ಸಂಗ್ರಹಣಾ ಪ್ಲ್ಯಾನ್ ಅನ್ನು ಈ ನಿಯಮಗಳ ಅಡಿಯಲ್ಲಿ ರದ್ದುಪಡಿಸುವ, ಡೌನ್‌ಗ್ರೇಡ್ ಮಾಡುವ ಅಥವಾ ಕೊನೆಗೊಳಿಸುವವರೆಗೆ ಯೋಜನೆಯು ಜಾರಿಯಲ್ಲಿರುತ್ತದೆ. ಪಾವತಿಸಿದ ಸಂಗ್ರಹಣಾ ಪ್ಲ್ಯಾನ್ ಅನ್ನು ನಿಮ್ಮ Google ಡ್ರೈವ್‌ನ ಸಂಗ್ರಹಣಾ ಸೆಟ್ಟಿಂಗ್‌ಗಳಿಂದ ಯಾವುದೇ ಸಮಯದಲ್ಲೂ ರದ್ದುಗೊಳಿಸಬಹುದು ಅಥವಾ ಡೌನ್‌ಗ್ರೇಡ್ ಮಾಡಬಹುದು. ಪ್ರಸ್ತುತ ಸೇವಾ ಅವಧಿ ಮುಕ್ತಾಯವಾದ ಬಳಿಕ ಮುಂದಿನ ಬಿಲ್ಲಿಂಗ್ ಅವಧಿಗೆ ನಿಮ್ಮ ರದ್ದುಗೊಳಿಸುವಿಕೆ ಅಥವಾ ಡೌನ್‌ಗ್ರೇಡ್ ಅನ್ವಯಿಸುತ್ತದೆ. ಪಾವತಿಸಿದ ಸಂಗ್ರಹಣಾ ಪ್ಲ್ಯಾನ್‍ಗಾಗಿ ನೀವು ಸೂಕ್ತ ಸಮಯದಲ್ಲಿ ಪಾವತಿಸದಿದ್ದರೆ, ನಿಮ್ಮ ಖಾತೆಯನ್ನು ಡೌನ್‌ಗ್ರೇಡ್ ಮಾಡಿ, ನಿಮ್ಮ ಸಂಗ್ರಹಣೆಯನ್ನು ಉಚಿತ ಸ್ಥಳಾವಕಾಶದ ಮಟ್ಟಕ್ಕೆ ಇಳಿಸುವ ಹಕ್ಕನ್ನು ನಾವು ಕಾಯ್ದಿರಿಸಿಕೊಂಡಿದ್ದೇವೆ. ಪಾವತಿಸಿದ ಸಂಗ್ರಹಣಾ ಪ್ಲ್ಯಾನ್‌ಗಾಗಿ ರದ್ದುಗೊಳಿಸುವಿಕೆ ಮತ್ತು ಮರುಪಾವತಿಯ ಪ್ರಕ್ರಿಯೆಯನ್ನು ನಮ್ಮ ಖರೀದಿ, ರದ್ದುಗೊಳಿಸುವಿಕೆ ಮತ್ತು ಹಿಂತಿರುಗಿಸುವಿಕೆ ನೀತಿ ಯಲ್ಲಿ ವಿವರಿಸಿದ್ದೇವೆ.

ಯೋಜನೆ ಮತ್ತು ದರದ ಬದಲಾವಣೆಗಳು. ಜಾರಿಯಲ್ಲಿರುವ ಸಂಗ್ರಹಣಾ ಪ್ಲ್ಯಾನ್ ಮತ್ತು ದರವನ್ನು ನಾವು ಬದಲಾಯಿಸಬಹುದು ಆದರೆ ಈ ಬದಲಾವಣೆಗಳ ಕುರಿತು ನಿಮಗೆ ಮುಂಚಿತವಾಗಿ ತಿಳಿಸುತ್ತೇವೆ. ನಿಮ್ಮ ಪ್ರಸ್ತುತ ಸೇವಾ ಅವಧಿ ಮುಕ್ತಾಯವಾದ ಬಳಿಕ, ಸೂಚನೆ ನೀಡಿದ ನಂತರ ನೀವು ಪಾವತಿ ಮಾಡಬೇಕಾದ ಸಮಯದಲ್ಲಿ ಈ ಬದಲಾವಣೆಗಳು ಅನ್ವಯಿಸುತ್ತವೆ. ದರ ಹೆಚ್ಚಳ ಅಥವಾ ಸಂಗ್ರಹಣಾ ಪ್ಲ್ಯಾನ್‌ನಲ್ಲಿ ಇಳಿಕೆಯಾದರೆ, ನಿಮಗೆ ಶುಲ್ಕ ವಿಧಿಸುವ ಮುನ್ನ ನಾವು ಕನಿಷ್ಠ 30 ದಿನಗಳಷ್ಟು ಮುಂಚಿತವಾಗಿ ಸೂಚನೆ ನೀಡುತ್ತೇವೆ. ನಿಮಗೆ 30 ದಿನಗಳಿಗಿಂತ ಕಡಿಮೆ ಸಮಯಾವಕಾಶ ನೀಡಿದರೆ, ಮುಂದಿನ ಪಾವತಿಯ ನಂತರ ಪಾವತಿ ಮಾಡಬೇಕಾದ ಸಮಯದವರೆಗೆ ಬದಲಾವಣೆಯು ಅನ್ವಯವಾಗುವುದಿಲ್ಲ. ಅಪ್‌ಡೇಟ್ ಮಾಡಿದ ಸಂಗ್ರಹಣಾ ಪ್ಲ್ಯಾನ್ ಅಥವಾ ದರದೊಂದಿಗೆ ನೀವು ಮುಂದುವರಿಯಲು ಬಯಸದಿದ್ದಲ್ಲಿ, ಪಾವತಿಸಿದ ಸಂಗ್ರಹಣಾ ಯೋಜನೆಯನ್ನು ನೀವು ಯಾವಾಗ ಬೇಕಾದರೂ ನಿಮ್ಮ Google ಡ್ರೈವ್‌ನಿಂದ ಸಂಗ್ರಹಣಾ ಸೆಟ್ಟಿಂಗ್‌ಗಳಲ್ಲಿ ರದ್ದುಗೊಳಿಸಬಹುದು ಅಥವಾ ಡೌನ್‌ಗ್ರೇಡ್ ಮಾಡಬಹುದು. ರದ್ದುಗೊಳಿಸುವಿಕೆ ಅಥವಾ ಡೌನ್‌ಗ್ರೇಡ್, ಪ್ರಸ್ತುತ ಸೇವಾ ಅವಧಿಯ ನಂತರ, ಮುಂದಿನ ಬಿಲ್ಲಿಂಗ್ ಅವಧಿಗೆ ಅನ್ವಯವಾಗುತ್ತದೆ; ನಿಮ್ಮ ಫೈಲ್‌ಗಳನ್ನು ನಿಮಗೆ ಲಭ್ಯವಾಗಿಸುವುದನ್ನು ನಾವು ಮುಂದುವರಿಸುತ್ತೇವೆ ಅಥವಾ Google ಡ್ರೈವ್‌ನಿಂದ ನಿಮ್ಮ ಫೈಲ್‌ಗಳನ್ನು ಹೊರತೆಗೆಯಲು ನಿಮಗೆ ಅವಕಾಶ ನೀಡುತ್ತೇವೆ.

9. ನಮ್ಮ ವಾರಂಟಿಗಳು ಮತ್ತು ಹಕ್ಕು ನಿರಾಕರಣೆಗಳು

ಸೂಕ್ತ ಮಟ್ಟದ ಕೌಶಲ ಮತ್ತು ಕಾಳಜಿಯೊಂದಿಗೆ ನಾವು Google ಡ್ರೈವ್ ಅನ್ನು ಒದಗಿಸುತ್ತಿದ್ದೇವೆ, ಆದ್ದರಿಂದ Google ಡ್ರೈವ್ ಬಳಸುವುದನ್ನು ನೀವು ಆನಂದಿಸುತ್ತೀರಿ ಎಂದು ನಾವು ಆಶಿಸುತ್ತೇವೆ. ಆದರೆ, Google ಡ್ರೈವ್‌ಗೆ ಸಂಬಂಧಿಸಿದಂತೆ ಕೆಲವು ವಿಷಯಗಳ ಕುರಿತು ನಾವು ಭರವಸೆ ನೀಡುವುದಿಲ್ಲ. ಪ್ರತ್ಯೇಕವಾಗಿ ಹೇಳಿರದ ಹೊರತು, Google ಡ್ರೈವ್ ಮೂಲಕ ಲಭ್ಯವಿರುವ ನಿರ್ದಿಷ್ಟ ಕಾರ್ಯಾಚರಣೆ, ಅದರ ವಿಶ್ವಾಸಾರ್ಹತೆ, ಲಭ್ಯತೆ ಅಥವಾ ನಿಮ್ಮ ಆವಶ್ಯಕತೆಗಳನ್ನು ಪೂರೈಸುವ ಸಾಮರ್ಥ್ಯದ ಕುರಿತು ನಾವು ಯಾವುದೇ ಬಾಧ್ಯತೆಗಳಿಗೆ ಒಳಪಡುವುದಿಲ್ಲ.

10. Google ಡ್ರೈವ್‌ನ ಬಾಧ್ಯತೆ

Google ಮತ್ತು ಅದರ ಪೂರೈಕೆದಾರರು ಮತ್ತು ವಿತರಕರು ಇವುಗಳಿಗೆ ಜವಾಬ್ದಾರರಾಗಿರುವುದಿಲ್ಲ ಅಥವಾ ಬಾಧ್ಯರಾಗಿರುವುದಿಲ್ಲ:

(a) ಈ ನಿಯಮಗಳ ನಮ್ಮ ಉಲ್ಲಂಘನೆಯ ಕಾರಣದಿಂದ ಉಂಟಾಗಿರದ ನಷ್ಟಗಳು;

(b) ನಿಮ್ಮೊಂದಿಗೆ ಸಂಬಂಧಿತ ಒಪ್ಪಂದವನ್ನು ಮಾಡಿಕೊಂಡ ಸಮಯದಲ್ಲಿ ನ್ಯಾಯಯುತವಾಗಿ ಮುಂಗಾಣಲಾಗದಂತಹ ಮತ್ತು Google ನಿಯಮಗಳನ್ನು ಉಲ್ಲಂಘಿಸುವ ಪರಿಣಾಮವಾಗಿ ಉಂಟಾಗುವ ಯಾವುದೇ ನಷ್ಟ ಅಥವಾ ಹಾನಿ; ಅಥವಾ

(c) ಕಳೆದುಕೊಂಡಿರುವ ಲಾಭಗಳು, ಆದಾಯಗಳು, ಅವಕಾಶ ಅಥವಾ ಡೇಟಾ ಒಳಗೊಂಡಂತೆ ನಿಮ್ಮ ಯಾವುದೇ ವ್ಯವಹಾರಗಳಿಗೆ ಸಂಬಂಧಿಸಿದ ನಷ್ಟಗಳು.

ಪರೋಕ್ಷವಾಗಿ ಸೂಚಿಸಿದ ಯಾವುದೇ ಆಶ್ವಾಸನೆಗಳೂ ಸೇರಿದಂತೆ, ಈ ನಿಯಮಗಳ ಅಡಿಯಲ್ಲಿನ ಯಾವುದೇ ಕ್ಲೇಮ್‌ಗಳಿಗಾಗಿ Google, ಮತ್ತು ಅದರ ಪೂರೈಕೆದಾರರು ಹಾಗೂ ವಿತರಕರ ಒಟ್ಟು ಬಾಧ್ಯತೆಯು, ಸೇವೆಗಳನ್ನು ಬಳಸುವುದಕ್ಕೆ ನೀವು ನಮಗೆ ಪಾವತಿಸಿದ ಒಟ್ಟು ಮೊತ್ತಕ್ಕೆ ಸೀಮಿತವಾಗಿರುತ್ತದೆ (ಅಥವಾ, ಕ್ಲೇಮ್‌ನ ವಿಷಯವು ಉಚಿತ ಸೇವೆಗೆ ಸಂಬಂಧಿಸಿದ್ದರೆ, ಆ ಸೇವೆಯನ್ನು ನಿಮಗೆ ಪುನಃ ಪೂರೈಸುವುದಕ್ಕೆ ಸೀಮಿತವಾಗಿರುತ್ತದೆ).

ಸಾವು ಅಥವಾ ವೈಯಕ್ತಿಕ ಗಾಯ, ವಂಚನೆ, ಮೋಸಗೊಳಿಸುವಂತಹ ಪ್ರಾತಿನಿಧ್ಯ ಅಥವಾ ಕಾನೂನಿನಿಂದ ಹೊರತುಪಡಿಸಲಾಗದ ಯಾವುದೇ ಬಾಧ್ಯತೆಗಾಗಿ Google ಮತ್ತು ಅದರ ಪೂರೈಕೆದಾರರ ಬಾಧ್ಯತೆಯನ್ನು ಹೊರತುಪಡಿಸುವ ಅಥವಾ ಸೀಮಿತಗೊಳಿಸುವ ಉದ್ದೇಶ ಹೊಂದಿರುವ ಯಾವುದೇ ಅಂಶ ಈ ನಿಯಮಗಳಲ್ಲಿಲ್ಲ.

11. ನಿಯಮಗಳನ್ನು ನಿಯಂತ್ರಿಸುವ ಕಾನೂನುಗಳು.

ನೀವು ಯುರೋಪಿಯನ್ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ನೆಲೆಸಿದ್ದರೆ, ಈ ನಿಯಮಗಳು ಅಥವಾ Google ಡ್ರೈವ್‌ನಿಂದ ಅಥವಾ ಇವುಗಳಿಗೆ ಸಂಬಂಧಿಸಿದಂತೆ ಉಂಟಾಗುವ ಯಾವುದೇ ತಕರಾರುಗಳಿಗೆ, ಕ್ಯಾಲಿಫೋರ್ನಿಯಾದ ಕಾನೂನುಗಳ ಸಂಘರ್ಷದ ನಿಯಮಗಳನ್ನು ಹೊರತುಪಡಿಸಿ, ಕ್ಯಾಲಿಫೋರ್ನಿಯಾ, ಅಮೆರಿಕಾದ ಕಾನೂನುಗಳು ಅನ್ವಯಿಸುತ್ತವೆ. ಈ ನಿಯಮಗಳಿಗೆ ಸಂಬಂಧಿಸಿದ ಅಥವಾ ಇವುಗಳಿಂದ ಉದ್ಭವಿಸುವ ಯಾವುದೇ ಕ್ಲೈಮ್‌ಗಳಿಗೆ ಪ್ರತ್ಯೇಕವಾಗಿ ಸಾಂತಾ ಕ್ಲಾರಾ ಕೌಂಟಿ, ಕ್ಯಾಲಿಫೋರ್ನಿಯಾ, ಅಮೆರಿಕಾದ ಫೆಡರಲ್ ಅಥವಾ ರಾಜ್ಯ ನ್ಯಾಯಾಲಯಗಳಲ್ಲಿ ದಾವೆ ಹಾಕಲಾಗುತ್ತದೆ ಮತ್ತು ನೀವು ಹಾಗೂ Google ಈ ನ್ಯಾಯಾಲಯಗಳಲ್ಲಿ ವೈಯಕ್ತಿಕ ನ್ಯಾಯ ವ್ಯಾಪ್ತಿಗೆ ಸಮ್ಮತಿ ಸೂಚಿಸುತ್ತೀರಿ.

ನೀವು ಯುರೋಪಿಯನ್ ಅಥವಾ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ನೆಲೆಸಿದ್ದರೆ, ನಿಯಮಗಳು ಅಥವಾ Google ಡ್ರೈವ್‌ನಿಂದ ಅಥವಾ ಇವುಗಳಿಗೆ ಸಂಬಂಧಿಸಿದಂತೆ ಉಂಟಾಗುವ ಯಾವುದೇ ತಕರಾರುಗಳಿಗೆ ನೀವು ವಾಸಿಸುವ ದೇಶದ ಮತ್ತು ಸ್ಥಳೀಯ ನ್ಯಾಯಾಲಯದ ಕಾನೂನುಗಳು ಅನ್ವಯವಾಗುತ್ತವೆ ಮತ್ತು ನೀವು ನಿಮ್ಮ ಸ್ಥಳೀಯ ನ್ಯಾಯಾಲಯಗಳಲ್ಲಿ ಇವುಗಳ ಕುರಿತ ದಾವೆಗಳನ್ನು ಹೂಡಬಹುದು. ವಿವಾದಗಳನ್ನು ಆನ್‌ಲೈನ್ ಮೂಲಕ ಬಗೆಹರಿಸಲು ಅವುಗಳನ್ನು ಯುರೋಪಿಯನ್ ಕಮಿಷನ್ ಆನ್‌ಲೈನ್ ​​ವಿವಾದ ನಿರ್ಣಯ ವೇದಿಕೆಗೆ ಸಲ್ಲಿಸಬಹುದು.

12. ಈ ನಿಯಮಗಳ ಕುರಿತು

ಈ ನಿಯಮಗಳು ಅಥವಾ Google ಡ್ರೈವ್‌ಗೆ ಅನ್ವಯಿಸುವ ಯಾವುದೇ ಹೆಚ್ಚುವರಿ ನಿಯಮಗಳನ್ನು ನಾವು ಈ ಕಾರಣಗಳಿಗಾಗಿ ಮಾರ್ಪಡಿಸಬಹುದು, ಉದಾಹರಣೆಗೆ: Google ಡ್ರೈವ್ ಅಥವಾ ಕಾನೂನು, ಕಸ್ಟಮ್ ಅಥವಾ ರಾಜಕೀಯ ಅಥವಾ ವಾಣಿಜ್ಯ ಕಾರ್ಯನೀತಿಯಲ್ಲಿನ ಬದಲಾವಣೆಗಳನ್ನು ಪ್ರತಿಬಿಂಬಿಸಲು; ಅಥವಾ ನಿಯಂತ್ರಕರು ಅಥವಾ ಸಂಬಂಧಿತ ಔದ್ಯಮಿಕ ಸಂಸ್ಥೆಗಳು ಜಾರಿಗೊಳಿಸಿರುವ ಮಾರ್ಗಸೂಚಿಗಳಿಗೆ ಪ್ರತಿಸ್ಪಂದಿಸಲು; ಅಥವಾ Google ತನ್ನ ಬಾಧ್ಯತೆಗಳನ್ನು ಪೂರೈಸುವುದನ್ನು ಸಾಧ್ಯಗೊಳಿಸಲು. ನೀವು ನಿಯಮಗಳನ್ನು ಕಾಲಕಾಲಕ್ಕೆ ಪರಿಶೀಲಿಸುತ್ತಿರಬೇಕು. ಈ ನಿಯಮಗಳಲ್ಲಿನ ಮಾರ್ಪಾಡುಗಳ ಕುರಿತಾದ ಸೂಚನೆಯನ್ನು ನಾವು ಈ ಪುಟದಲ್ಲಿ ಪೋಸ್ಟ್ ಮಾಡುತ್ತೇವೆ. ಮಾರ್ಪಾಡು ಮಾಡಿದ ಹೆಚ್ಚುವರಿ ನಿಯಮಗಳ (“ಹೆಚ್ಚುವರಿ ನಿಯಮಗಳು”) ಸೂಚನೆಯನ್ನು ನಾವು Google ಡ್ರೈವ್‌ನಲ್ಲಿ ಪೋಸ್ಟ್ ಮಾಡುತ್ತೇವೆ ಮತ್ತು ನಿಯಮಗಳಲ್ಲಿನ ಗಮನಾರ್ಹ ಬದಲಾವಣೆಗಳ ಕುರಿತು ನಿಮಗೆ ಮುಂಚಿತವಾಗಿ ಸೂಚನೆ ನೀಡುತ್ತೇವೆ. ಬದಲಾವಣೆಗಳು ಹಿಂದಿನ ದಿನಾಂಕದಂದು ಜಾರಿಯಾಗುವಂತೆ ಅನ್ವಯಿಸುವುದಿಲ್ಲ ಮತ್ತು ಅವುಗಳನ್ನು ಪೋಸ್ಟ್ ಮಾಡಿದ ಅಥವಾ ನಿಮಗೆ ತಿಳಿಸಿದ 14 ದಿನಗಳ ನಂತರ ಜಾರಿಯಾಗುತ್ತವೆಯೇ ಹೊರತು, ಅದಕ್ಕೆ ಮುಂಚಿತವಾಗಿ ಅಲ್ಲ. ಆದರೆ, ಹೊಸ ಕಾರ್ಯಾಚರಣೆಗಳು ಅಥವಾ ವೈಶಿಷ್ಟ್ಯಗಳನ್ನು (“ಹೊಸ ಸೇವೆಗಳು”) ಸಂಬೋಧಿಸುವ ಬದಲಾವಣೆಗಳು ಅಥವಾ ಕಾನೂನು ಕಾರಣಗಳಿಗಾಗಿ ಮಾಡಿದ ಬದಲಾವಣೆಗಳು ತಕ್ಷಣ ಜಾರಿಯಾಗುತ್ತವೆ. ಹೊಸ ಸೇವೆಗಾಗಿ, ಮಾರ್ಪಾಡು ಮಾಡಿದ ನಿಯಮಗಳನ್ನು ನೀವು ಒಪ್ಪದಿದ್ದರೆ, ಆ ಹೊಸ ಸೇವೆಯ ಬಳಕೆಯನ್ನು ನೀವು ಸ್ಥಗಿತಗೊಳಿಸಬೇಕು (ಹೆಚ್ಚಿನ ಮಾಹಿತಿಗಾಗಿ, ಮೇಲ್ಗಡೆ “ಕೊನೆಗೊಳಿಸುವಿಕೆ” ನೋಡಿ).

ಈ ನಿಯಮಗಳು ಹಾಗೂ ಹೆಚ್ಚುವರಿ ನಿಯಮಗಳ ನಡುವೆ ಸಂಘರ್ಷವಿದ್ದರೆ, ಆ ಸಂಘರ್ಷಕ್ಕೆ ಸಂಬಂಧಿಸಿದಂತೆ, ಹೆಚ್ಚುವರಿ ನಿಯಮಗಳೇ ನಿಯಂತ್ರಣ ಹೊಂದಿರುತ್ತವೆ.

Google ಮತ್ತು ನಿಮ್ಮ ನಡುವಿನ ಸಂಬಂಧವನ್ನು ಈ ನಿಯಮಗಳು ನಿಯಂತ್ರಿಸುತ್ತವೆ. ಅವುಗಳು ಯಾವುದೇ ಥರ್ಡ್ ಪಾರ್ಟಿ ಫಲಾನುಭವಿ ಹಕ್ಕುಗಳನ್ನು ಸೃಷ್ಟಿಸುವುದಿಲ್ಲ.

ನೀವು ಈ ನಿಯಮಗಳನ್ನು ಅನುಸರಿಸದಿದ್ದರೆ ಮತ್ತು ನಾವು ಕೂಡಲೇ ಕ್ರಮ ಕೈಗೊಳ್ಳದಿದ್ದರೆ, ನಾವು ಹೊಂದಿರುವ ಹಕ್ಕುಗಳನ್ನು ಬಿಟ್ಟುಕೊಡುತ್ತಿದ್ದೇವೆ ಎಂದು ಅರ್ಥವಲ್ಲ (ಉದಾಹರಣೆಗೆ, ಭವಿಷ್ಯದಲ್ಲಿ ಕ್ರಮ ಕೈಗೊಳ್ಳುವುದು).

ನಿರ್ದಿಷ್ಟ ನಿಯಮವನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಕಂಡುಬಂದರೆ, ಅದು ಬೇರೆ ನಿಯಮಗಳ ಮೇಲೆ ಪರಿಣಾಮ ಬೀರುವುದಿಲ್ಲ.

Google ಅನ್ನು ಹೇಗೆ ಸಂಪರ್ಕಿಸಬೇಕು ಎಂಬ ಕುರಿತಾದ ಮಾಹಿತಿಗಾಗಿ, ನಮ್ಮ ಸಂಪರ್ಕ ಪುಟ ಕ್ಕೆ ಭೇಟಿ ನೀಡಿ.